ಕಲಬುರಗಿ:
ರಾಜ್ಯದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಶಂಕಿತ ವೃದ್ಧನೋರ್ವ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಲಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, 76 ವರ್ಷದ ಕೊರೊನಾ ಶಂಕಿತ ಮಹ್ಮದ್ ಹುಸೇನ ಸಿದ್ದಕಿ, ಕೊರೊನಾ ವೈರಸ್ ನಿಂದ ಮರಣಹೊಂದಿರುವ ಪ್ರಯುಕ್ತ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯವರೆಗೂ ಕಲಬುರ್ಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಶರಣಬಸಪ್ಪಾ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು, ಎಲ್ಲಾ ತರದ ಮುಂಜಾಗ್ರತೆ ಹಾಗೂ ನಿಂಯತ್ರಣ ಕ್ರಮ ಕೈಗೊಂಡು ವರದಿ ನೀಡಲು ಆದೇಶಿಸಿದ್ದಾರೆ.
ಮಹ್ಮದ್ ಹುಸೇನ್ ಸಿದ್ಧಿಕಿ ಸೌದಿ ಅರೇಬಿಯಾದಿಂದ ಕಲಬುರಗಿಗೆ ಬಂದಿದ್ದರು. ನಂತರ, ಮಾರ್ಚ್ 5 ರಂದು ಅವರಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ವೃದ್ಧನ ಗಂಟಲು ದ್ರವ ಸಂಗ್ರಹಿಸಿ, ವೈದ್ಯರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್ ಗೆ ಕಳುಹಿಸಿದ್ದರು.
ಹೆಚ್ಚಿನ ಚಿಕಿತ್ಸೆ ಗಾಗಿ ಕುಟುಂಬ ಸದಸ್ಯರು ವೃದ್ಧನನ್ನು ಸೋಮವಾರ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಇಂದು ಸಂಜೆ ಅಥವಾ ನಾಳೆ ಪರೀಕ್ಷೆಯ ಮಾದರಿ ಹೊರಬರಬೇಕಿದೆ. ಆದರೆ, ಅಷ್ಟರಲ್ಲೇ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ಆದರೆ, ಕೊರೊನಾ ದಿಂದಲೇ ಸಾವನ್ನಪ್ಪಿರುವುದು ದೃಢಪಟ್ಟಿಲ್ಲ. ಸದ್ಯ ವೈದ್ಯಕೀಯ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ