ಬೆಂಗಳೂರು :
ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (65) ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ಮಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಧರ್ಮೇಗೌಡರ ಮೃತದೇಹವನ್ನು ಶಿವಮೊಗ್ಗದ ಸಿಮ್ಸ್ ಶವಾಗಾರಕ್ಕೆ ತರಲಾಗಿದೆ. ಸಿಮ್ಸ್‌ನ ಇಬ್ಬರು ಹಾಗೂ ಓರ್ವ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯರು ಶವ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಶವ ಪರೀಕ್ಷೆಗೆ ಸುಮಾರು ಮೂರು ತಾಸು ಬೇಕಾಗುತ್ತದೆ ಎಂದು ಸಿಮ್ಸ್ ಮೂಲಗಳು ತಿಳಿಸಿವೆ.
ಆತ್ಮಹತ್ಯೆ ಕುರಿತಂತೆ ಪ್ರತಿಕ್ರಿಸಿದ ಮಾಜಿ ಸಚಿವ ಸಿ ಟಿ ರವಿ ಅವರು, ಧರ್ಮೇಗೌಡರು ಖಾಸಗಿ ಕಾರಿನಲ್ಲಿ ಬಂದಿದ್ದರು. ಸುಮಾರು ನಾಲ್ಕು ಗಂಟೆಯಿಂದ ಇಲ್ಲೇ ಸುತ್ತಾಡಿದ್ದಾರೆ. ಆಮೇಲೆ ಅಂದ್ರೆ ಸಂಜೆ 6 ಗಂಟೆಗೆ ಆಗಮಿಸಿದ ರೈಲಿಗೆ ತಲೆ ಕೊಟ್ಟಿದ್ದಾರೆ. ಧರ್ಮೇಗೌಡ ಕುಟುಂಬಸ್ಥರಿಗೆ ರಾತ್ರಿ 12.45ರ ಸುಮಾರಿಗೆ ಪೊಲೀಸರು ನೆಟ್ವರ್ಕ್ ಮೂಲಕ ಪತ್ತೆ ಹಚ್ಚಿದಾಗ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ವಿಧಾನಪರಿಷತ್ನಲ್ಲಿ ಗಲಾಟೆಯಾದ ಸಂದರ್ಭದಲ್ಲಿ ನಾನು ತಮಿಳುನಾಡಿನಲ್ಲಿದ್ದೆ. ಬಳಿಕ ಆ ಘಟನೆ ಬಗ್ಗೆ ಧರ್ಮೇಗೌಡರ ಬಳಿ ಮಾತನಾಡಿದಾಗ ಅವರು ಯಾವುದೇ ರೀತಿಯ ಬೇಸರ ವ್ಯಕ್ತಪಡಿಸಲಿಲ್ಲ. ಆದ್ರೆ, ಈ ವಿಷಯ ಯಾಕೆ ಅಷ್ಟು ಮನಸ್ಸಿಗೆ ಹಚ್ಕೊಂಡ್ರೋ ಎಂಬುದು ಗೊತ್ತಾಗಿಲ್ಲ. ನಿರೀಕ್ಷೆ ಮಾಡದಂತಹ ಘಟನೆ ಆಗಿದೆ ಎಂದು ಸಿಟಿ ರವಿ ಹೇಳಿದರು.
ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ. ಸಜ್ಜನ, ಸನ್ನಡತೆಯ ಉಪಸಭಾಪತಿಗಳನ್ನು ಕಳೆದುಕೊಂಡದ್ದು ನಮ್ಮ ರಾಜ್ಯಕ್ಕೆ ನಷ್ಟ. ಅವರ ಕುಟುಂಬ ಹಾಗೂ ಬಂಧುಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ವಿಧಾನಪರಿಷತ್ ಉಪಸಭಾಪತಿ ಹಾಗೂ @JanataDal_S ಮುಖಂಡರಾದ ಎಸ್.ಎಲ್. ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಆಘಾತವಾಗಿದೆ. ಸಜ್ಜನ, ಸನ್ನಡತೆಯ ಉಪಸಭಾಪತಿಗಳನ್ನು ಕಳೆದುಕೊಂಡದ್ದು ನಮ್ಮ ರಾಜ್ಯದ ನಷ್ಟ. ಅವರ ಕುಟುಂಬ ಹಾಗೂ ಬಂಧುಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ.
— H D Devegowda (@H_D_Devegowda) December 29, 2020
ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಡೆಟ್ ನೋಟ್ ನಲ್ಲಿ ತಮ್ಮ ಆತ್ಮಹತ್ಯೆಗೆ ಕಾರಣ ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ.
ಕೆಲದಿನಗಳ ಹಿಂದೆ ವಿಧಾನಪರಿಷತ್ ನಲ್ಲಿ ನಡೆದ ಆ ಒಂದು ಘಟನೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ವಿಧಾನ ಪರಿಷತ್ ಅಧಿವೇಶನದಲ್ಲಿ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡರು ಕುಳಿತುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಧರ್ಮೇಗೌಡರನ್ನು ಎಳೆದಾಡಿದ್ದರು. ಇದು ಧರ್ಮೇಗೌಡರಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಹೀಗಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದರಾ ಎನ್ನುವ ಅನುಮಾನ ಶುರುವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
