ಬೆಂಗಳೂರು :
ಬಂಧಿತ ಭೂಗತ ಪಾತಕಿ ರವಿ ಪೂಜಾರಿ ಜೊತೆ ಸಿಸಿಬಿ ವಿಂಗ್ನ ಎಸಿಪಿಯೊಬ್ಬರು ನಿರಂತರ ಸಂಪರ್ಕದಲ್ಲಿದ್ದರು ಎಂಬ ವಿಚಾರ ಬಯಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಭೂಗತ ಪಾತಕಿ ರವಿ ಪೂಜಾರಿ ವಿಚಾರಣೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದು, ವಿವಿಐಪಿ ಭದ್ರತಾ ವಿಭಾಗದ ಎಸಿಪಿ ವೆಂಕಟೇಶ್ ಪ್ರಸನ್ನ ತನ್ನ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು ಎಂಬ ವಿಚಾರವನ್ನು ರವಿ ಪೂಜಾರಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ರವಿ ಪೂಜಾರಿ ಅಲ್ಲದೇ ಕರಾವಳಿ ಭಾಗದ ಮತ್ತೊಬ್ಬ ಕುಖ್ಯಾತ ಪಾತಕಿ ಕಲಿ ಯೋಗೇಶ್ ಜೊತೆ ಕೂಡ ಎಸಿಪಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಆಪಾದನೆ ಹಿನ್ನೆಲೆ ಸಿಸಿಬಿಯಿಂದ ಅತಿ ಗಣ್ಯ ವ್ಯಕ್ತಿಗಳ ಭದ್ರತಾ (ವಿವಿಐಪಿ) ವಿಭಾಗಕ್ಕೆ ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ.
ಹೀಗಾಗಿ ರವಿ ಪೂಜಾರಿಯ ಮಾಹಿತಿಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರವಿ ಪೂಜಾರಿಯ ಮಾಹಿತಿ ಆಧರಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಇಲಾಖಾ ಮಟ್ಟದ ತನಿಖೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು, ಹದಿನೈದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಮಂಗಳೂರಿನ ರವಿ ಪೂಜಾರಿಯನ್ನು ಇಂಟರ್‌ಪೋಲ್ ಪೊಲೀಸರು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದ ಹಲವು ಉದ್ಯಮಿಗಳು, ಚಿತ್ರನಟರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದ ಪೂಜಾರಿ, ಹಣ ವಸೂಲಿ ಮಾಡುತ್ತಿದ್ದನು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ