ದಾವಣಗೆರೆ :
ರಾಜ್ಯ ಸರ್ಕಾರ ಶಿಕ್ಷಣ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸುವ ಮೂಲಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿ ಪೋಷಕರಿಗೆ ಕೊಡಲಿ ಪೆಟ್ಟು ನೀಡಿದೆ ಎಂದು ಆರ್‍ಟಿಇ ಪೋಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಯೋಗಾನಂದ ಆಕ್ರೋಶ ವ್ಯಕ್ತಪಡಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಖಾಸಗಿ ಅನುದಾನರಹಿತ ಆರ್‍ಟಿಇ ಶಾಲೆಗಳ ಮತ್ತು ಪೋಷಕರ ಸಂಘದ ಜಿಲ್ಲಾ ಶಾಖೆ ಹಾಗೂ ರಾಜ್ಯ ಆರ್‍ಟಿಇ ಪೋಷಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಣ ಹಕ್ಕು ಕಾಯಿದೆಯ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ಕೆಲ ಕಾಸ್ಮೋ ಪೋಲಿಟಿಯನ್ ಶಾಲೆಗಳ ಆರ್‍ಟಿಇ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ಮಣಿದಿದ್ದ ಕೆಲ ಸೋಗಲಾಡಿ ಅಧಿಕಾರಿಗಳು, ಶಾಸಗಿ ಶಾಲೆಗಳು ಆರ್‍ಟಿಇ ಪೋಷಕರನ್ನು ಸುಲಿಗೆ ಮಾಡುತ್ತಿವೆ ಎಂಬುದಾಗಿ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಲೆಯಲ್ಲಿ ತುಂಬಿದ್ದರು.
ಅಲ್ಲದೇ, ಸಾಹಿತಿಗಳು ಸಹ ಈ ಕಾಯಿದೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ತಲುಪಿವೆ ಎಂಬ ಅಭಿಪ್ರಾಯವನ್ನು ಹೇಳಿದ್ದರು. ಇದರಿಂದ ಗೊಂದಲಕ್ಕೆ ಒಳಗಾಗಿ ಕುಮಾರಸ್ವಾಮಿ ಆರ್‍ಟಿಇ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಅದನ್ನು ದುರ್ಬಲಗೊಳಿಸಿ ಲಕ್ಷಾಂತರ ಪೋಷಕರಿಗೆ ಕೊಡಲಿ ಪೆಟ್ಟು ನೀಡಿದ್ದು, ಖಾಸಗಿ ಶಾಲೆಗಳಲ್ಲೂ ಬಡವರ ಮಕ್ಕಳಿಗೆ ಸಮಾನ ಶಿಕ್ಷಣ ನೀಡಬೇಕೆಂಬ ಶಿಕ್ಷಣ ಹಕ್ಕು ಕಾಯಿದೆಯ ಆಶಯವನ್ನೇ ಬುಡಮೇಲು ಮಾಡಿದೆ ಎಂದು ಆರೋಪಿಸಿದರು.
ಆರ್‍ಟಿಇ ಕಾಯಿದೆಯನ್ನು ದುರ್ಬಲ ಗೊಳಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಾವು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವು. ಆದರೆ, ಹೈಕೋರ್ಟ್‍ನ ನ್ಯಾಯಮೂರ್ತಿಗಳು ಸಹ ಶಿಕ್ಷಣ ಹಕ್ಕು ಕಾಯಿದೆಗೆ ಸಂಬಂಧಪಟ್ಟ ಕಲಂ 12(1ಸಿ) ಹಾಗೂ 4ನೇ ವಿಧಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ, ರಾಜ್ಯ ಸರ್ಕಾರದ ತಿದ್ದುಪಡಿಯನ್ನು ಮಾನ್ಯ ಮಾಡುವ ಮೂಲಕ ಆತಂಕಕಾರಿ ತೀರ್ಪು ನೀಡಿತ್ತು.
ಇದನ್ನು ಗಮನಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರು ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಯಾರಾದರೂ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ, ಹೈಕೋರ್ಟ್ ತೀರ್ಪು ಬಿದ್ದು ಹೋಗಲಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮ ಹಾಗೂ ಹೈಕೋರ್ಟ್ ತೀರ್ಪು ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೇ.25 ರಷ್ಟು ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳ ಜೊತೆಗೆ ಓದಬೇಕು. ಈ ಮೂಲಕ ಬಡವರು ಮತ್ತು ಶ್ರೀಮಂತರ ಮಧ್ಯೆ ಸಮತೋಲನ ಕಾಪಾಡಬೇಕೆಂಬುದು ಆರ್‍ಟಿಇ ಕಾಯಿದೆಯ ಮೂಲ ಉದ್ದೇಶವಾಗಿದೆ. ಆದರೆ, ರಾಜ್ಯ ಸರ್ಕಾರ ಯಾರ್ಯಾರದ್ದೋ ಮಾತು ಕೇಳಿ, ಆರ್‍ಟಿಇ ಕಾಯಿದೆ ಇರುವುದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರದೇ, ಮುಚ್ಚುವ ಹಂತ ತಲುಪಿವೆ ಹಾಗೂ ಆರ್ಥಿಕ ಹೊರೆಯ ಕಾರಣ ನೀಡಿ, ಆರ್‍ಟಿಇ ಕಾಯಿದೆಗೆ ತಿದ್ದುಪಡಿ ತಂದಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸದೇ, ಸುಸಜ್ಜಿತ ಕಟ್ಟಡಗಳನ್ನು ಸಹ ಕಟ್ಟಿಸದೇ, ಸಾರ್ಕರಿ ಶಾಲೆಗಳತ್ತ ಮಕ್ಕಳು ಬರುತ್ತಿಲ್ಲ ಎಂಬುದಾಗಿ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರಿ ಶಾಲೆಗಳ ಅರ್ಧಕ್ಕರ್ಧ ಮಕ್ಕಳು ಅನುತ್ತೀರ್ಣ ಆಗುತ್ತಿದ್ದು, ಇದರ ಹೊಣೆ ಹೊರುವವರ್ಯಾರು? ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಇಷ್ಟೆಲ್ಲಾ ನ್ಯೂನತೆಗಳನ್ನು ಇಟ್ಟುಕೊಂಡು, ಆರ್‍ಟಿಇ ಕಾಯಿದೆಯಿಂದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬುದಾಗಿ ಹೇಳುತ್ತಿರುವುದು ಸಮಂಜಸ ಕಾರಣವಲ್ಲ. ಆರ್‍ಟಿಇ ಕಾಯಿದೆ ದುರ್ಬಲಗೊಳಿಸಿರುವುದರ ಹಿಂದೆ ಹಲವು ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಆರ್.ಟಿ.ಇ. ಶಾಲೆಗಳ ಮತ್ತು ಪೋಷಕರ ಸಂಘದ ಜಿಲ್ಲಾಧ್ಯಕ್ಷ ಅಣಬೇರು ಶಿವಮೂರ್ತಿ, ಆರ್‍ಟಿಇ ಕಾಯಿದೆಯ ಮೂಲಕ 2012ರಿಂದ ಇಲ್ಲಿಯ ವರೆಗೂ ಜಿಲ್ಲೆಯ 347 ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸುಮಾರು 9 ಸಾವಿರ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರ್‍ಟಿಇ ಕಾಯಿದೆಯನ್ನು ದುರ್ಬಲಗೊಳಿಸಿ, ಬಡ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ಓದುವ ಅವಕಾಶ ತಪ್ಪಿಸಿದ್ದಾರೆಂದು ಕಿಡಿಕಾರಿದರು.
ಸಭೆಯಲ್ಲಿ ಸಂಘದ ಮಂಜಾ ನಾಯ್ಕ, ಕೆ.ಬಸವರಾಜಪ್ಪ, ಕಬ್ಬೂರು ಕರಿಬಸಪ್ಪ, ಪ್ರಸನ್ನ, ಮಹೇಶ್, ಶ್ರೀಧರ್, ದಾದಾಪೀರ್, ಗುರುಪ್ರಸಾದ್ ಚಿತ್ರದುರ್ಗ ಮತ್ತಿತರರು ಉಪಸ್ಥಿತರಿದ್ದರು. ಪ್ರಮೋದ್ ಪಾಟೀಲ್ ಭಾನುವಳ್ಳಿ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ