ಗುರಿ ತಲುಪಲು ಗಾಢ ಏಕಾಗ್ರತೆ ಅವಶ್ಯ!

 ದಾವಣಗೆರೆ:

      ಯಾವುದೇ ಆಮಿಷ, ಆಕರ್ಷಣೆಗಳಿಗೆ ಒಳಗಾಗದೇ ಗುರಿ ತಲುಪಬೇಕು. ಇದಕ್ಕಾಗಿ ಗಾಢವಾದ ಏಕಾಗ್ರತೆ, ಆಸಕ್ತಿ ರೂಢಿಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಸಲಹೆ ನೀಡಿದರು.

      ನಗರದ ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್, ಚೌಡೇಶ್ವರಿ ದೇವಸ್ಥಾನ ಸಮಿತಿಯಿಂದ ತೊಗಟವೀರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರಿ ತಲುಪಲು ಅರ್ಜುನನ ಏಕಾಗ್ರತೆ ಹೊಂದಬೇಕು ಎಂದರು.

      ಪ್ರತಿ ವಿದ್ಯಾರ್ಥಿಯಲ್ಲಿ ಪ್ರತಿಭೆ ಇರುತ್ತದೆ. ಇದನ್ನು ಗುರುತಿಸುವುದು ಪಾಲಕರ ಪ್ರಮುಖ ಕೆಲಸವಾಗಬೇಕು. ಜೀವನದಲ್ಲಿ ಹಲವಾರು ಆಕರ್ಷಣೆಗಳು ನಮ್ಮನ್ನು ಸೆಳೆಯುತ್ತವೆ. ಇವುಗಳಿಗೆ ಒಳಗಾಗದಂತೆ ಮನಸು ದೃಢವಾಗಿಸಿಕೊಳ್ಳಬೇಕು. ಪಂಚೇಂದ್ರೀಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಬುದ್ಧಿವಂತಿಕೆ ಮೊನಚು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

       ವಿದ್ಯಾರ್ಥಿಗಳು ಪರೀಕ್ಷೆ ವೇಳೆ ನಿರಂತರ ಓದುವುದು ಸರಿಯಲ್ಲ. ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಒಂದೇ ತಾಸು ಅಭ್ಯಾಸ ಮಾಡಿದರೆ ಸಾಕು. ನೆನಪಿನಲ್ಲಿ ಉಳಿಯುತ್ತದೆ. ಕಠಿಣ ವಿಷಯಗಳನ್ನು ಸಮರ್ಥವಾಗಿ ಎದುರಿಸಲು ಸಾಮಥ್ರ್ಯ ಗಳಿಸಬೇಕು ಎಂದರು.

      ತೊಗಟವೀರ ವಸತಿನಿಲಯ ಸಮಿತಿಯ ಅಧ್ಯಕ್ಷ ಅಶ್ವತ್ಥ ನಾರಾಯಣ ಮಾತನಾಡಿ, ಸಮಾಜದಿಂದ ಶಾಲೆ ಆರಂಭಿಸಿದ್ದು, ಈ ಸಲ ನರ್ಸರಿಯಲ್ಲಿ 18 ಮಕ್ಕಳು ದಾಖಲಾಗಿದ್ದಾರೆ. ಶೀಘ್ರವೇ 1ರಿಂದ 10ನೇ ತರಗತಿ ಪ್ರಾರಂಭಿಸುವ ಚಿಂತನೆ ಇದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

      ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ವಾತಕೋತ್ತರ ಪದವಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 43 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತೊಗಟವೀರ ವಸತಿನಿಲಯ ಸಮಿತಿಯ ಖಜಾಂಚಿ ಭೋಜಪ್ಪ, ಉಪಾಧ್ಯಕ್ಷ ಇ.ಆರ್.ಶಂಕರ್, ದ್ವಾರಕನಾಥ್, ಯುವಕ ಮಂಡಳಿ ಅಧ್ಯಕ್ಷ ಪ್ರಕಾಶ್, ದೈವ ಸಮಿತಿ ಮುಖಂಡರಾದ ಬಸವರಾಜ್, ಎಚ್.ರಾಮಣ್ಣ, ವೆಂಕಟಾಚಲಮೂರ್ತಿ, ಶಶಿಧರಮೂರ್ತಿ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link