ಬೆಂಗಳೂರು:
ರೆಸಾರ್ಟ್ ನಲ್ಲಿ ಶಾಸಕರ ಹೊಡೆದಾಟ ರಾಜಕೀಯ ಮೌಲ್ಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂಬ ಆತಂಕ ಮೂಡಿದ್ದು, ಇದೊಂದು ಕೀಳುಮಟ್ಟದ ರಾಜಕಾರಣ ಎಂದು ಡಿಸಿಎಂ ಡಾ: ಜಿ.ಪರಮೇಶ್ವರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರಬೋಸ್ 122ನೇ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಅವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಪರಮೇಶ್ವರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ನಾನು ಕಳೆದ 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಇಂತಹ ಕೀಳುಮಟ್ಟದ ರಾಜಕಾರಣ ಎಂದೂ ನೋಡಿರಲಿಲ್ಲ. ಶಾಸಕರ ನಡುವಿನ ಗಲಾಟೆ ನಾಚಿಕೆಗೇಡಿನ ಪ್ರಕರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು 25 ವರ್ಷದ ಯುವಕರನ್ನು ರಾಜಕಾರಣಕ್ಕೆ ಸೇರುವಂತೆ ಆಹ್ವಾನ ಮಾಡುತ್ತಿದ್ದೇವೆ. ಆದರೆ, ಈ ರೀತಿಯ ಘಟನೆಗಳಿಂದ ರಾಜಕಾರಣದ ಮೌಲ್ಯಗಳು ಹಾಳಾಗುತ್ತಿವೆ. ಇದೇ ನಡವಳಿಕೆ ಇದ್ದರೆ ಮುಂದಿನ ಪೀಳಿಗೆ ರಾಜಕಾರಣಕ್ಕೆ ಬರಲು ಹಿಂಜರಿಯಬಹುದು. ಇದು ಒಳ್ಳೆಯ ಸಂದೇಶವಲ್ಲ ಎಂದೂ ಹೇಳಿದರು.
ಈಗಾಗಲೇ ಶಾಸಕ ಆನಂದ್‍ಸಿಂಗ್ ಶಾಸಕ ಗಣೇಶ್ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಶೀಘ್ರವೇ ಗಣೇಶ್‍ರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಗಲಾಟೆಗೆ ಕಾರಣರಾದ ಶಾಸಕ ಗಣೇಶ್‍ರನ್ನು ಅಮಾನತು ಮಾಡಿದೆ. ಕಾನೂನಾತ್ಮಕ ಕ್ರಮಕ್ಕೆ ಕೆಪಿಸಿಸಿ ಕೂಡ ಒತ್ತಾಯ ಮಾಡಿದೆ. ಜೊತೆಗೆ, ನನ್ನ ನೇತೃತ್ವದಲ್ಲಿ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಕೃಷ್ಣಬೈರೇಗೌಡ ಅವರನ್ನೊಳಗೊಂಡ ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ನಾವೂ ಕೂಡ ಸತ್ಯಾಸತ್ಯತೆ ಪರಿಶೀಲಿಸಲಿದ್ದೇವೆ. ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ಒದಗಿಸಿ ಕೊಡಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
