ಹಾಸನ:
ಕೊರೊನಾ ವಿರುದ್ಧ ದಣಿವರಿಯದೆ ಕೆಲಸ ಮಾಡಿದ್ದ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಅನಾರೋಗ್ಯದಿಂದ ಕುಸಿದು ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.
ಮೃತರನ್ನು ಡಾ. ಶಿವಕಿರಣ್ ಎಂದು ಗುರುತಿಸಲಾಗಿದೆ. ಇವರು ಹಾಸನ ಜಿಲ್ಲೆಯ ಆಲೂರು ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊರೋನಾ ಸಮಯದಲ್ಲಿ ರಜೆಯಿಲ್ಲದೆ ನಿರಂತರವಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಕೆಲಸದ ಸಮಯದಲ್ಲಿ ತಲೆನೋವಿನಿಂದ ಬಳಲಿದ್ದ ವೈದ್ಯ ಶಿವಕಿರಣ್ ಸಹೋದ್ಯೋಗಿಗಳ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ ಕಳೆದು ಐದು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಶಿವಕಿರಣ್ ತಲೆ ಸುತ್ತಿ ಬಿದ್ದಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 5 ದಿನಗಳಿಂದ ವೆಂಟಿಲೇಷನ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ,ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಡಾ. ಶಿವಕಿರಣ್ ಅವರು ಸಾವನ್ನಪ್ಪಿದ್ದಾರೆ.
ಮೃತ ವೈದ್ಯರ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ.ಕೊರೊನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ