ಬೆಂಗಳೂರು:
2018-19ನೇ ಸಾಲಿನಲ್ಲಿ ರಾಜ್ಯದ್ಯಾಂತ ತೀವ್ರ ಮಳೆ ಕೊರತೆಯಿಂದ, ಮುಂಗಾರು ಹಂಗಾಮಿನಲ್ಲಿ 100 ತಾಲ್ಲೂಕುಗಳನ್ನು ಹಾಗೂ ಹಿಂಗಾರು ಋತುವಿನಲ್ಲಿ 156 ತಾಲ್ಲೂಕುಗಳನ್ನು ಬರ-ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಸನ್ಮಾನ್ಯ ಮುಖ್ಯ ಮಂತ್ರಿಗಳು ಇಂದು (15-5-2019) ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಪ್ರಸ್ತುತ ಬರ-ಪರಿಸ್ಥಿತಿಯನ್ನು ಸಮಪರ್ಕವಾಗಿ ಎದುರಿಸಲು ಸಲಹೆ ಸೂಚನೆಗಳನ್ನು ನೀಡಲಾಗಿದೆ.
ರಾಜ್ಯ ಸರ್ಕಾರದಿಂದ ಬರ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳು:
ರಾಜ್ಯ ಸರ್ಕಾರವು ಮುಖ್ಯವಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಲಭ್ಯತೆಯಾಗುವಂತೆ ಮಾಡುವುದರ ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ನೀಡುವ ಮೂಲಕ ಗುಳೆ ಹೋಗುವುದನ್ನು ನಿವಾರಿಸಲಾಗಿದೆ.
ಕುಡಿಯುವ ನೀರಿನ ಪರಿಸ್ಥಿತಿ:
- ಪ್ರಸ್ತುತ ಟ್ಯಾಂಕರ್ ಹಾಗೂ ಖಾಸಗಿ ಬೋರ್‍ವೆಲ್‍ಗಳ ಮೂಲಕ 2,999 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ, ಇದರ ಪೈಕಿ 1,632 ಗ್ರಾಮಗಳಿಗೆ 2,322 ಟ್ಯಾಂಕರ್‍ಗಳ ಮೂಲಕ ಹಾಗೂ 1,367 ಗ್ರಾಮಗಳಿಗೆ 1,873 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶದಲ್ಲಿ 440 ವಾರ್ಡ್‍ಗಳಿಗೆ 271 ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇರೆಗೆ ಪಡೆದುಕೊಳ್ಳಲಾಗಿದೆ.
- 24×7 ಮಾದರಿಯಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆದು 1077/1070 ಉಚಿತ ದೂರವಾಣಿ ಮೂಲಕ ಕುಡಿಯುವ ನೀರಿನ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಸದರಿ ಉಚಿತ ದೂರವಾಣಿ ಸಂಖ್ಯೆಗೆ ಯಾವುದೇ ನೆಟ್‍ವರ್ಕ್‍ನಿಂದ ಕರೆ ಮಾಡಬಹುದಾಗಿರುತ್ತದೆ.
- ಬರ ಪರಿಸ್ಥಿತಿ ಮತ್ತು ಹವಾಮಾನ ಪರಿಸ್ಥಿತಿಗೆ ಸಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ 10 ಸಚಿವ ಸಂಪುಟದ ಉಪ ಸಮಿತಿ ಸಭೆಗಳನ್ನು ನಡೆಸಲಾಗಿದೆ (ದಿನಾಂಕ:02.07.2018, 21.08.2018, 11.09.2018, 12.10.2018, 25.11.2018, 12.12.2018, 26.12.2018, 18.01.2019 ಮತ್ತು 01.03.2019).
- ಬರ ಪರಿಹಾರ ಕಾರ್ಯಗಳ ಪ್ರಗತಿ ಮತ್ತು ನಿರ್ವಹಣೆಯ ಅವಲೋಕನಕ್ಕೆ ಸಂಬಂಧಿಸಿದಂತೆ ಕಂದಾಯ ವಿಭಾಗದ ಮಟ್ಟದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ರಚಿಸಲಾಗಿದ್ದು, ಸದರಿ ಸಚಿವ ಸಂಪುಟ ಸಮಿತಿಗಳು ಬರ ಪೀಡಿತ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿರುತ್ತಾರೆ.
- ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರತಿನಿತ್ಯ ಪರಿಶೀಲಿಸುವುದು ಹಾಗೂ ತೊಂದರೆ ಇದ್ದಲ್ಲಿ ಕೂಡಲೇ ದುರಸ್ಥಿ ಕೈಗೊಳ್ಳುವುದು. ಒಂದು ವೇಳೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಲಭ್ಯತೆ ಇಲ್ಲದಿದ್ದಲ್ಲಿ, ಟ್ಯಾಂಕರ್ ಮೂಲಕ ಪೂರೈಕೆ ಮಾಡುವುದು. ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪ್ರತಿ ನಿತ್ಯ ಪರಿಶೀಲನೆ ಮಾಡಿ ದುರಸ್ಥಿಗೊಳಗಾದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
- ಪ್ರತಿ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿ ಹೋಬಳಿ ಹಂತದ ಎಲ್ಲಾ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಸೃಜನೆ, ಮೇವು ಪರಿಸ್ಥಿತಿ ಇತ್ಯಾದಿ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.
ಬಿಲ್ ಪಾವತಿಗೆ ಒಂದು ವಾರದ ಗಡುವು:
ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‍ಗಳಿಗೆ ಏಪ್ರಿಲ್ ತಿಂಗಳ ವರೆಗಿನ ಬಾಕಿ ಬಿಲ್ ಪಾವತಿಯನ್ನು ವಾರದೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ತಿಳಿಸಿದರು. 15 ದಿನಗಳಿಗೊಮ್ಮೆ ಬಿಲ್ ಪಾವತಿಸುವಂತೆ ಸೂಚಿಸಿ, ಅವಧಿ ಮುಗಿದ ನಂತರ ಬಿಲ್ ಸಲ್ಲಿಸಿದರೆ ಆಯಾ ಪಿಡಿಒ, ಇಓ ಗಳೇ ಹೊಣೆಗಾರರು. ಅವರ ವಿರುದ್ಧ ಕ್ರಮ ಕೈಗೊಳುವಂತೆ ಸೂಚಿಸಿದರು.
ಟ್ಯಾಂಕರ್‍ಗಳಿಗೆ ಜಿ.ಪಿ.ಎಸ್ :
ಕುಡಿಯುವ ನೀರಿನ ಟ್ಯಾಂಕರ್‍ಗಳಿಗೆ ಜಿ.ಪಿ.ಎಸ್ ಅಳವಡಿಕೆ ಕಾರ್ಯವನ್ನು ಕೆಲವು ಜಿಲ್ಲೆಗಳಲ್ಲಿ ಪೂರ್ಣಗೊಳಿಸಲಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಜಿ.ಪಿ.ಎಸ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು, ಹಣ ಸೋರಿಕೆಯಾಗುವುದನ್ನು ಅಧಿಕಾರಿಗಳು ತಡೆಗಟ್ಟಬೇಕು ಎಂದರು. ಈ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದೂ ತಿಳಿಸಿದರು.
ಬಾಡಿಗೆ ಆಧಾರದ ಮೇಲೆ ಕೊಳವೆ ಬಾವಿಗಳು:
ರಾಜ್ಯದಲ್ಲಿ ಒಟ್ಟು 1873 ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದ್ದು, ಇನ್ನೂ ಹೆಚ್ಚಿನ ಶ್ರಮವಹಿಸಿ ನೀರು ಹೆಚ್ಚಿರುವ ಕೊಳವೆಬಾವಿಗಳನ್ನು ಬಾಡಿಗೆ ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಅಂತರ್ಜಲ ಸಾರ್ವಜನಿಕರ ಸ್ವತ್ತು. ಹೀಗಾಗಿ ಅಗತ್ಯವಿದ್ದಲ್ಲಿ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆಯಲು ಸಹ ಅಧಿಕಾರಿಗಳು ಹಿಂಜರಿಯಬಾರದು ಎಂದರು.
ಹೊಸದಾಗಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ 24 ಗಂಟೆಗಳ ಒಳಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಸಹಾಯವಾಣಿ :
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಎಲ್ಲಾ ಜಿಲ್ಲೆಗಳಲ್ಲಿ 24*7 ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಇವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರತಿ ವ್ಯಕ್ತಿಗೆ ಕನಿಷ್ಠ 40 ಎಲ್.ಪಿ.ಸಿ.ಡಿ ನೀರು ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು. ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಮೇವು ಪರಿಸ್ಥಿತಿ:
- ರಾಜ್ಯದಲ್ಲಿ 1,29,08,292 ಜಾನುವಾರುಗಳಿದ್ದು, ಪ್ರಸ್ತುತ 62,48,640 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದು ಮುಂದಿನ 12 ವಾರಗಳಿಗೆ ಸಾಕಾಗುತ್ತದೆ. ಪ್ರಸ್ತುತ 165 ಮೇವು ಬ್ಯಾಂಕ್‍ಗಳನ್ನು ತೆರೆಯಲಾಗಿದ್ದು, ಸದರಿ ಮೇವು ಬ್ಯಾಂಕ್‍ಗಳಲ್ಲಿ ಪ್ರತಿ ಕೆ.ಜಿಗೆ ರೂ.2.00 ರಂತೆ ಮೇವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 16 ಗೋಶಾಲೆಗಳನ್ನು ತೆರೆಯಲಾಗಿದ್ದು, ಇದರಲ್ಲಿ 14,054 ಜಾನುವಾರುಗಳನ್ನು ಸಂರಕ್ಷಿಸಲಾಗಿದೆ. ಅಗತ್ಯತೆಯನುಸಾರ ಗೋಶಾಲೆ ಹಾಗೂ ಮೇವಿನ ಬ್ಯಾಂಕ್‍ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
- ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಹಸಿರು ಮೇವು ಬೆಳೆಯಲು ರೂ.42.7 ಕೋಟಿಗಳ ವೆಚ್ಚದಲ್ಲಿ 16.80 ಲಕ್ಷ ಮಿನಿಕಿಟ್‍ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಇದರಿಂದಾಗಿ 63.00 ಲಕ್ಷ ಮೆಟ್ರಿಕ್ ಟನ್ ಹಸಿರು ಮೇವು ಇಲ್ಲಿಯವರೆಗೆ ಉತ್ಪಾದನೆಯಾಗಿದೆ.
- ನೀರಾವರಿ ಪ್ರದೇಶಗಳಾದ ರಾಯಚೂರು, ಮಂಡ್ಯ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭತ್ತದ ಮೇವನ್ನು ಬೇಲಿಂಗ್ ಮಾಡಿ ಕ್ರಮವಹಿಸಲಾಗಿದ್ದು, ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಒಣ ಮೇವನ್ನು ಮೇವಿನ ಕೊರತೆ ಇರುವ ಜಿಲ್ಲೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ.
ಬರ ಪರಿಹಾರ ಕಾರ್ಯಗಳಿಗಾಗಿ ಬಿಡುಗಡೆ ಮಾಡಲಾದ ಹಾಗೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನದ ವಿವರ:
- ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) – ಬರಪೀಡಿತ ತಾಲ್ಲೂಕುಗಳಿಗೆ ತಲಾ ರೂ.2.00 ಕೋಟಿಯಂತೆ ರೂ.324 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. – ಪ್ರತಿ ತಾಲ್ಲೂಕಿಗೆ ತಲಾ ರೂ.1.00 ಕೋಟಿಯಂತೆ ಎರಡು ಬಾರಿ ಬಿಡುಗಡೆ ಮಾಡಲಾಗಿದೆ.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – ಬಿಡುಗಡೆಯಾದ ಅನುದಾನ : ರೂ.201.4 ಕೋಟಿ – ಟಾಸ್ಕ್‍ಫೋರ್ಸ್ ಅಡಿಯಲ್ಲಿ.
- ನಗರಾಭಿವೃದ್ಧಿ ಇಲಾಖೆ – ಬಿಡುಗಡೆಯಾದ ಅನುದಾನ : ರೂ.50.00 ಕೋಟಿ – ತುರ್ತು ಕುಡಿಯುವ ನೀರು ಪೂರೈಕೆ.
- ಪಶುಸಂಗೋಪನೆ ಇಲಾಖೆ – ರೂ.42.70 ಕೋಟಿಗಳು ಮಿನಿಕಿಟ್‍ಗಾಗಿ – ಕಂದಾಯ ಇಲಾಖೆಯಿಂದ
- ಬಿಡುಗಡೆಯಾದ ಅನುದಾನ ಒಟ್ಟು – ರೂ. 618.10 ಕೋಟಿ
- ಬರ ಮತ್ತು ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು ರೂ.713.76 ಕೋಟಿಗಳು ಲಭ್ಯವಿದೆ.
ಚುನಾವಣಾ ನೀತಿ ಸಂಹಿತೆಯ ಸಂದರ್ಭದಲ್ಲಿ ನಿರ್ವಹಿಸಿದ ಕ್ರಮಗಳು:
- ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರೆ ಜಿಲ್ಲಾ ಅಧಿಕಾರಿಗಳೊಂದಿಗೆ ಬರ ನಿರ್ವಹಣೆಗೆ ಸಂಬಂಧಿಸಿದಂತೆ 4 ವೀಡಿಯೋ ಸಂವಾದಗಳನ್ನು ನಡೆಸಿರುತ್ತಾರೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬರ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ದಿನಾಂಕ:27.04.2019 ರಂದು ಸಭೆಯನ್ನು ನಡೆಸಿರುತ್ತಾರೆ.
- ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ನಿಯಮಿತವಾಗಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿರುತ್ತಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ವಿ.ನಿ) ಇವರು ಪರಿಸ್ಥಿತಿಯನ್ನು ದಿನಂಪ್ರತಿ ಪರಿಶೀಲಿಸುತ್ತಿದ್ದಾರೆ. ಇದಲ್ಲದೇ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸಿ ಸಲಹೆ/ಸೂಚನೆಗಳನ್ನು ನೀಡಿರುತ್ತಾರೆ.
- ಕುಡಿಯುವ ನೀರಿನ ಸಮಸ್ಯೆಗಳನ್ನು ತಕ್ಷಣ ಇತ್ಯರ್ಥಗೊಳಿಸುವ ಸಲುವಾಗಿ ಕಂಟ್ರೋಲ್ ರೂಂ ತೆರೆದು ದಿನದ 24 ಗಂಟೆಗಳಲ್ಲೂ ಕುಂದು-ಕೊರತೆಗಳನ್ನು ಆಲಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಕಂಟ್ರೋಲ್ ರೂಂ ಸಮರ್ಪಕವಾಗಿ ಜಿಲ್ಲಾಡಳಿತದ ವತಿಯಿಂದ ಕಾರ್ಯ ನಿರ್ವಹಿಸುತ್ತಿದೆ.
- ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪ್ರತಿ ನಿತ್ಯ ಪರಿಶೀಲನೆ ಮಾಡಿ ದುರಸ್ಥಿಗೊಳಗಾದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ಸೃಜನೆ:
- ಉದ್ಯೋಗ ಸೃಜನೆ ಕಾಮಗಾರಿಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಸಮುದಾಯ ಮಟ್ಟದ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗದುಕೊಳ್ಳಲು ಸೂಚಿಸಲಾಗಿದೆ. ಮಾರ್ಚ್ 31, 2019ರ ಅವಧಿಯವರೆಗೆ ನಿಗದಿಪಡಿಸಿರುವ ಒಟ್ಟು 10.00 ಕೋಟಿ ಮಾನವ ದಿನಗಳ ಗುರಿಗೆ ಎದುರಾಗಿ 10.47 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 21.11 ಲಕ್ಷ ಕುಟಂಬಗಳಿಗೆ ಉದ್ಯೋಗ ಒದಗಿಸಿ ರೂ.3821.46 ಕೋಟಿ ವೆಚ್ಚ ಮಾಡಲಾಗಿದೆ.
- ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕನಿಷ್ಟ ಒಂದು ಸಾಮೂಹಿಕ ಕೆಲಸವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳಲಾಗಿದೆ.
- 2018-19ನೇ ಸಾಲಿನಲ್ಲಿ ಒಟ್ಟು 8.10 ಕೋಟಿ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ 3.03 ಲಕ್ಷ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
- ನರೇಗಾ ಯೋಜನೆಯಡಿ ಬಿಸಿಲಿನ ತಾಪಮಾನ ಮತ್ತು ಉಷ್ಣಾಂಶದ ಪ್ರಖಾರತೆ ಹೆಚ್ಚಾಗಿರುವುದರಿಂದ ಕಾಮಗಾರಿಗಳ ಸ್ಥಳದಲ್ಲಿ ಶುದ್ದಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇನ್ನೂ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
- ಶೇ.98 ರಷ್ಟಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರ ಕೂಲಿ ಹಣ ಪಾವತಿಯನ್ನು 15 ದಿನಗೊಳಗೆ ಪಾವತಿಸಲಾಗಿದೆ.
ಸಭೆಯಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣಬೈರೇಗೌಡ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಅಪರಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ ,ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ