ಹೃದಯವಿಲ್ಲದ ಪ್ರಧಾನಿ ಎಂದರೆ ಅದು ಮೋದಿ ಮಾತ್ರ-ದಿನೇಶ್ ಗುಂಡೂರಾವ್

ಬೆಂಗಳೂರು :

       ಬಿಜೆಪಿ ಅಜೆಂಡಾಗಳಿಗೆ ಹತ್ತಿರವಾಗಿರುವ ವಿಚಾರಗಳಿಗೆ ಮಾತ್ರ ಪ್ರಧಾನಿ ಮೋದಿ ಬಹಳ ಬೇಗ ಪ್ರತಿಕ್ರಿಯಿಸುತ್ತಾರೆಯೇ ಹೊರತು ಜನಸಾಮಾನ್ಯರಿಗಾಗಿ ಅಲ್ಲ. ಹೃದಯವಿಲ್ಲದ ಪ್ರಧಾನಿ ಎಂದರೆ ಅದು ಮೋದಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

      ಕೆಪಿಸಿಸಿ ವತಿಯಿಂದ‌ ನಗರದ ಅಂಬೇಡ್ಕರ್ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನಾಚರಣೆ ಹಾಗೂ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಜ್ಯೋತಿ ಬೆಳಗುವ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

      ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ನೆರೆಪ್ರವಾಹ ತಲೆದೋರಿದೆ. ಸಣ್ಣಪುಟ್ಟ ವಿಚಾರಗಳಿಗೂ ಟ್ವೀಟ್ ಮಾಡುವ ಮೋದಿ ಇನ್ನೂ ಏಕೆ ಕರ್ನಾಟಕದ ಪ್ರವಾಹದ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಪಕ್ಷದವರಾಗಲೀ ಮಾಧ್ಯಮಗಳಾಗಲೀ ರಾಜ್ಯಕ್ಕೆ ಮೋದಿ ಏಕೆ ಇನ್ನೂ ಭೇಟಿ ಕೊಟ್ಟಿಲ್ಲ ಎಂದು ಕೇಳುತ್ತಿಲ್ಲ. ಮೋದಿಯವರದ್ದು ಬರೀ ಹಿಂದೂತ್ವದ ಅಜೆಂಡಾ. ಹೃದಯವಿಲ್ಲದ ಪ್ರಧಾನಿ ಎಂದರೆ ಅದು ಮೋದಿ ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಆಧುನಿಕ ಭಾರತದ ನಿರ್ಮಾತೃ ಮಾಜಿ ಪ್ರಧಾನಿ ಜವಾಹರ್ಲಾಲ್‌ ನೆಹರು. ಅವರು ಹಾಕಿಕೊಟ್ಟ ಬುನಾದಿಯೇ ಇಂದಿನವರೆಗೂ ದೇಶವನ್ನು ಸುಭದ್ರವಾಗಿ ಇಟ್ಟಿದೆ. ಆಡಳಿತದಲ್ಲಿರುವ ಪಕ್ಷ ಮತ್ತು ಸರ್ಕಾರ ನೆಹರು ಕುಟುಂಬದ ಬಗ್ಗೆ ಸತ್ಯವನ್ನು ತಿರುಚಿ ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಲು ಪಂ.ನೆಹರು ಅವರು ತಮ್ಮ ಆದಾಯ ಆಸ್ತಿಯನ್ನೆಲ್ಲಾ ತ್ಯಜಿಸಿ, ಕಾರಾಗೃಹವನ್ನು ಅನುಭವಿಸಿದವರು ಎಂದರು.

       ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಕೆಪಿಸಿಸಿ ವತಿಯಿಂದ ಈ ಬಾರಿ ವಿಶೇಷವಾಗಿ ಆಚರಿಸಲಾಗಿದೆ. ರಾಜೀವ್ ಗಾಂಧಿ ಅವರ ಬದುಕು ಮತ್ತು ಅವರ ಕುಟುಂಬದ ತ್ಯಾಗ ಬಲಿದಾನವನ್ನು ಎಲ್ಲರೂ ಅರಿಯಬೇಕಿದೆ ಎಂದರು.  ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನೆಹರು ಅವರ ಸಾಧನೆ ಕೊಡುಗೆಗಳನ್ನು ತಿರುಚಿ ಹೇಳುವಂತಹ ಪರಿಸ್ಥಿತಿ ಬಂದಿದೆ. ದೇಶದ ಇಬ್ಬಾಗ, ಗಣತಂತ್ರ ವ್ಯವಸ್ಥೆ ಸೇರಿದಂತೆ ಸ್ವಾತಂತ್ರ್ಯಾನಂತರ ದೇಶದಲ್ಲಿ ತಲೆದೋರಿದ ನೂರಾರು ಸಮಸ್ಯೆಗಳನ್ನು ಸರಿಪಡಿಸಿ ಅಖಂಡ ಭಾರತವನ್ನು ನಿರ್ಮಾಣ ಮಾಡಿದ್ದಾರೆ. 73 ವರ್ಷದ ಬಳಿಕವೂ ದೇಶ ಒಂದಾಗಿರಲು ಹಿಂದೂಮ ಹಾಸಭಾ, ಬಿಜೆಪಿ, ಸಂಘ ಪರಿವಾರ ಕಾರಣವಲ್ಲ. ದೇಶ ಇಂದಿಗೂ ನಿಂತಿರುವುದು ನೆಹರು ಅವರು ತೆಗೆದುಕೊಂಡಿರುವ ಸೂಕ್ತ ತೀರ್ಮಾನಗಳ ಮೇಲೆ. ಸುಳ್ಳಿನ ಮೂಲಕ ಜನರ ಬ್ರೇನ್ ವಾಶ್ ಮಾಡಲಾಗುತ್ತಿದೆ. ಮೋದಿ ಹಾಗೂ ಬಿಜೆಪಿಯನ್ನು ಟೀಕಿಸಿದವರನ್ನು ದೇಶದ್ರೋಹಿಗಳು, ಪಾಕಿಸ್ತಾನದ ಏಜೆಂಟ್ ಎಂದು ಬಿಂಬಿಸಲಾಗುತ್ತಿದೆ. ಅಲ್ಪಸಂಖ್ಯಾತರು, ದಲಿತರ ಮೇಲೆ ಬಹಿರಂಗವಾಗಿ ಅತ್ಯಾಚಾರ, ಕೊಲೆ ಆಗುತ್ತಿದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೋಮುವಾದ ಸಿದ್ಧಾಂತ ಪ್ರಚೋದನೆ, ಭಯೋತ್ಪಾದನೆಯೇ ಬಿಜೆಪಿಯ ಅಜೆಂಡಾವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು‌.

      ಅಧಿಕಾರ, ಸ್ಥಾನಮಾನ, ಗೌರವ ಪ್ರಾಪ್ತಿಗಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಹೋರಾಟ ಮಾಡಬಾರದು. ಪಕ್ಷ ಸಂಘಟನೆಯೇ ಮುಖ್ಯ ಗುರಿ ಎಂದು ಒಂದಾಗಬೇಕು. ಕರ್ನಾಟಕದಲ್ಲಿ ಈಗಿರುವ ಪರಿಸ್ಥಿತಿಯನ್ನು ಒಗ್ಗಟ್ಟಿನಿಂದ ಎದುರಿಸಿ ಸಾಧನೆ ಮಾಡಬಹುದು. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link