ಬೆಂಗಳೂರು:
ನಾನು ಹೆದರಿಕೊಂಡು ಹೋಗುವಂತ ಮಗನಲ್ಲ. ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿ ಅವರ ಮುಂದೆ ನಮ್ಮ, ನಮ್ಮ ಸ್ನೇಹಿತರ ಮನೆಯಲ್ಲಿ ಸಿಕ್ಕ ಹಣ ನಾವೇ ಸ್ವಂತವಾಗಿ ದುಡಿದು ಸಂಪಾದಿಸಿದ ಹಣ ಎಂದು ಇಡಿ ಮುಂದೆ ಅಫಿಡವಿಟ್ ಸಲ್ಲಿಸಿದ್ದೇವೆ. ಆದರೇ ಇದನ್ನು ನಂಬದ ಇಡಿ, ನಿಮ್ಮದೇ ಹಣ ಎಂದು ಹೇಳುತ್ತಿದೆ. ಇದಕ್ಕೆಲ್ಲಾ ನಾನು ಹೆದರಿಕೊಂಡು ಹೋಗುವಂತ ಮಗನಲ್ಲ. ನಾನು ಕೆಂಪೇಗೌಡನ ಮಗ. ನಾನು ಮಾಡಬಾರದ ಕೆಲಸ ಏನೂ ಮಾಡಿಲ್ಲ. ಕಾನೂನು ರೀತಿಯಲ್ಲಿಯೇ ಮಾಡಿದ್ದೇನೆ. ನಾನು ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ವಿವಿಧ ಕಾರಣದಿಂದ ಹೊರಗಿದ್ದ ನಾನು, ರಾತ್ರಿ ಮನೆಗೆ ಬಂದಾಗ ನಾಲ್ಕೈದು ಇಡಿ ಅಧಿಕಾರಿಗಳು ಬಂದು ನಿಮಗೆ ಸಮನ್ಸ್ ಇದೆ ಎಂದು ನೋಟೀಸ್ ಕೊಟ್ಟು ಹೋಗಿದ್ದಾರೆ. ಇಂದು ಮಧ್ಯಾಹ್ನ 1ಕ್ಕೆ ವಿಚಾರಣೆಗೆ ಹಾಜರಾಗಿ ಎಂದು ಹೇಳಿ ಹೋಗಿದ್ದಾರೆ. ನನಗೆ ಬಂದಿರುವ ಎಲ್ಲಾ ನೋಟೀಸಿಗೂ ಉತ್ತರ ನೀಡಿದ್ದೇನೆ. ನಾನು ಮಧ್ಯಮ ಕುಟುಂಬದವನು. ನನ್ನ ತಾಯಿ ಆಸ್ತಿಯನ್ನು ಬೇನಾಮಿ ಆಸ್ತಿ ಎಂದು ತೀರ್ಮಾನಿಸಿ ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನಾನು ಕೋರ್ಟ್ ಮೊರೆ ಹೋಗಿದ್ದು ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಕ್ಕ ಅಕ್ರಮ ಹಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಡಿಕೆಶಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನಿನ್ನೆ ಹೈಕೋರ್ಟ್ ರದ್ದುಗೊಳಿಸಿತ್ತು. ನಿನ್ನೆ ರಾತ್ರಿ ಮತ್ತೆ ಡಿಕೆಶಿ ಮನೆಗೆ ತೆರಳಿರುವ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ