ನೇಸರನ ನಗಿಸಿದ ಕವಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ!!

ಬೆಂಗಳೂರು:

       ತೇರ ಏರಿ ಅಂಬರದ್ಯಾಗೆ ನೇಸರ ನಗುತಾನೆ…., ಎಂದು ಕೆಂಡದಂತೆ ಪ್ರಜ್ವಲಿಸುವ ಸೂರ್ಯನನ್ನೇ ಕಾವ್ಯದಲ್ಲಿ ನಗಿಸಿದ ಭಾವಕವಿ ಪದ್ಮಶ್ರೀ ಪುರಸ್ಕøತ ಡಾ.ದೊಡ್ಡರಂಗೇಗೌಡ ಅವರು ಹಾವೇರಿಯಲ್ಲಿ ಫೆ.26ರಿಂದ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನಾರಾಗಿದ್ದಾರೆ.

      ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮನುಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರೊ.ದೊಡ್ಡರಂಗೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಈ ಹಿಂದೆಯೂ ಜಿಲ್ಲೆಯವರಾದ ಬಿ.ಎಂ.ಶ್ರೀ, ಬೆಳ್ಳಾವೆ ವೆಂಕಟನಾರಾಣಪ್ಪ, ಡಾ.ಕಮಲಾ ಹಂಪನಾ, ಬರಗೂರು ರಾಮಚಂದ್ರಪ್ಪ ಅವರುಗಳೂ ಸಮ್ಮೇಳನಾಧ್ಯಕ್ಷತೆ ಗೌರವಕ್ಕೆ ಭಾಜನರಾಗಿದ್ದು, ಕಲ್ಪತರು ನಾಡಿನ ಸಾಹಿತ್ಯ ವಲಯಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.

     ಕುರುಬರಹಳ್ಳಿಯ ಪ್ರತಿಭೆ:

      ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ದಬ್ಬೆಘಟ್ಟ ಪಕ್ಕ ಕುರುಬರಹಳ್ಳಿಯಲ್ಲಿ 1946 ಫೆಬ್ರವರಿ 7ರಂದು ರಂಏಗೌಡ, ಅಕ್ಕಮ್ಮ ದಂಪತಿಗೆ ಜನಿಸಿದ ದೊಡ್ಡರಂಗೇಗೌಡ ಅವರು ಕಷ್ಟದಲ್ಲೇ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರಿದವರು.

      ಮಧುಗಿರಿಯಲ್ಲಿ ಓದುತ್ತಿರುವಾಗ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಸಹಪಾಠಿಗಳಾಗಿದ್ದ ದೊಡ್ಡರಂಗೇಗೌಡ ಅವರು ಕಾಲೇಜು ಉಪನ್ಯಾಸಕ, ವೃತ್ತಿಗೆ ಸೇರುವ ಮುನ್ನಾ ರೈಲ್ವೇ ಮೇಲ್ ಸರ್ವೀಸ್‍ನಲ್ಲಿ ಸಾಮಾನ್ಯ ನೌಕರರಾಗಿ ಕೆಲಸ ಮಾಡಿ ಕಷ್ಟದ ಜೀವನ ಸವೆಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉನ್ನತಶಿಕ್ಷಣ ಪೂರೈಸಿದ ಇವರು ಬೆಂಗಳೂರಿನ ಎಸ್‍ಎಲ್‍ಎನ್ ಕಾಲೇಜು, ಶೇಷಾದ್ರಿಪುರಂ ಕಾಲೇಜಿನಲ್ಲೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಪದ್ಮಶ್ರೀಯವರೆಗೆ ಬೆಳೆದ ಸಾಧಕ ವಾಮನಮೂರ್ತಿ :

       ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ವಿಮರ್ಶಾ ಕೃತಿಗಳ ರಚನೆಯಲ್ಲಿ ಸಿದ್ಧಹಸ್ತರಾಗಿರುವ ದೊಡ್ಡರಂಗೇಗೌಡರು ನೋಡಲು ವಾಮನಮೂರ್ತಿಯಂತೆ ಕಂಡರೂ ಪದ್ಮಶ್ರೀ ಪುರಸ್ಕೃತರಾಗುವವರೆಗೆ ಬೆಳೆದು ನಿಂತ ಸಾಧಕರೆನಿಸಿದ್ದಾರೆ. 560ಕ್ಕೂ ಅಧಿಕ ಚಿತ್ರಗೀತೆಗಳನ್ನು ರಚಿಸಿರುವ ಗೌಡರು ರಚಿಸಿರುವ ಗೀತೆಗಳು ರಂಗನಾಯಕಿ, ಪರಸಂಗದ ಗೆಂಡೆತಿಮ್ಮ, ಅಲೆಮನೆ, ಅನುಪಮ, ಅರುಣರಾಗ, ಮುದುಡಿದ ತಾವರೆ ಅರಳಿತು ಮೊದಲಾದ ಚಿತ್ರಗಳಲ್ಲಿ ಜನಪ್ರಿಯವಾಗಿದೆ.

      ಆದಿಚುಂಚನಗಿರಿ ಮಠ, ಶ್ರೀಗಳ ಕುರಿತು ಹೊರತಂದ ಕ್ಯಾಸೆಟ್‍ಗಳು ಜನಪ್ರಿಯವಾಗಿದ್ದು, 2 ಪ್ರಗಾಥ ಕೃತಿ, 10ಕ್ಕೂ ಅಧಿಕ ಕವನ ಸಂಕಲನ, 2 ಗದ್ಯ ಕೃತಿ, ಪ್ರವಾಸ ಸಾಹಿತ್ಯ, ಮಾವು ಬೇವು, ಪ್ರಾಯಮೂಡಿತು ಹೆಸರಿನ ಭಾವಗೀತೆ ಆಲ್ಬಂಗಳನ್ನು ಪ್ರಕಟಿಸಿದ್ದು, ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಪ್ರಸ್ತುತ ಗ್ರಂಥಾಲಯ ಆಯ್ಕೆ ಸಮಿತಿ ಅಧ್ಯಕ್ಷರಾಗುವವರೆಗೆ ಆಡಳಿತ, ಸಾಹಿತ್ಯ, ಶಿಕ್ಷಣ ವಲಯದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

        ಸಿನಿಮಾ ನಿರ್ದೇಶನ, ಸಂಗೀತ ಸಂಯೋಜನೆಯ ಸಾಹಸ ಪ್ರಯೋಗಗಳನ್ನು ದೊಡ್ಡರಂಗೇಗೌಡರು ಮಾಡಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ , ರಾಜ್ಯೋತ್ಸವ, ಉತ್ತಮ ಗೀತರಚನೆಕಾರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತುರುವೇಕೆರೆಯಲ್ಲಿ ನಡೆದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಭಾಜನರಾಗಿದ್ದ ಗೌಡರು ಎಲ್ಲರಿಗೂ ಸೀದಾ ಸಾದ ಜುಬ್ಬ, ಪೈಜಾಮದಲ್ಲೇ ಸರಳವಾಗಿ ಕೈಗೆ ಸಿಗುವ ಭಾವಕವಿ.

 ಅಭಿನಂದನೆಗಳ ಮಹಾಪೂರ ;

      ಡಾ.ದೊಡ್ಡರಂಗೇಗೌಡ ಅವರು 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿರುವುದಕ್ಕೆ ಜಿಲ್ಲಾ ಕಸಾಪ ಸೇರಿದಂತೆ ಹಲವು ಸಾಹಿತಿಗಳು, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಅಭಿನಂದಿಸಿದ್ದಾರೆ. ಜಾಲತಾಣಗಳಲ್ಲಿ ಅಭಿನಂದನೆ ಮಹಾಪೂರವೇ ಹರಿಯತೊಡಗಿದ್ದು, ಅಧ್ಯಕ್ಷರ ಆಯ್ಕೆಯ ಕುರಿತಂತೆಯೂ ಪರ ವಿರೋಧದ ಚರ್ಚೆಗಳು ಸಾಗಿವೆ. ಕೇಸರಿ ಪ್ರಭಾವ, ಜಾತಿ ರಾಜಕೀಯ ಲೆಕ್ಕಚಾರಗಳು ಮೇಲುಗೈ ಸಾಧಿಸುವೇ ಎಂದೆಲ್ಲ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಗೌಡರ ಸಾಹಿತ್ಯ, ಸಿನಿಮಾ ಕ್ಷೇತ್ರದ ಸಾಧನೆಯನ್ನು ಬಿಂಬಿಸುವ ಕಾರ್ಯವನ್ನು ಜಾಲತಾಣಗಳಲ್ಲಿ ಮಾಡಲಾಗುತ್ತಿದೆ.

ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಬಂಧ ಶುಕ್ರವಾರ ಸಂಜೆ ನಡೆದ ಕಸಾಪ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೊ.ರು.ಚ, ಡಾ.ದೊಡ್ಡರಂಗೇಗೌಡ, ವೀಣಾಶಾಂತೇಶ್ವರ, ಕೆ.ಎಸ್.ಭಗವಾನ್, ಸಾ.ರಾ.ಅಬೂಬ್‍ಕರ್, ವಿವೇಕರೈ ಹೀಗೆ ಹಲವರ ಹೆಸರು ಚರ್ಚೆಗೆ ಬಂದವು. ಅಂತಿಮವಾಗಿ ಬಹುಮತದ ಆಯ್ಕೆಯಾಗಿ ದೊಡ್ಡರಂಗೇಗೌಡರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ತುಮಕೂರು ಜಿಲ್ಲೆಯ ಮೂಲದ ಸಾಹಿತಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ.

-ಬಾ.ಹ.ರಮಾಕುಮಾರಿ, ಜಿಲ್ಲಾ ಕಸಾಪ ಅಧ್ಯಕ್ಷೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap