ಕಾರವಾರ:
ಸಮುದ್ರದ ತಳದಲ್ಲಿ ವಾಸ ಮಾಡುವ ಅಪರೂಪದ ಜಲಚರ ‘ಕಾಯಿನ್ ಮೀನು’ ಅಥವಾ ‘ಸ್ಯಾಂಡ್ ಡಾಲರ್ ಮೀನು’ ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್‍ನಲ್ಲಿ ಕಾಣಿಸಿಕೊಂಡಿದೆ.
ನಕ್ಷತ್ರದ ಮೀನಿನ ಪ್ರಬೇಧಕ್ಕೆ ಸೇರಿದ ಇವುಗಳಿಗೆ ವೈಜ್ಞಾನಿಕವಾಗಿ ಕ್ಲಾಯಪೇಸ್ಟರ್ ರಾರಿಸ್ಪಯನಸ್ ಎಂದು ಕರೆಯಲಾಗುತ್ತದೆ. ಆಭರಣದಲ್ಲಿ ಅಳವಡಿಸುವ ಡಾಲರ್ ಮಾದರಿಯಲ್ಲಿಯೇ ಇವುಗಳ ದೇಹ ರಚನೆಯಿದೆ. ಇವು ಕಡಲಿನ ತಳದಲ್ಲಿರುವ 14 ರಿಂದ 15 ಮೀಟರ್ ಆಳದ ಮರಳುನಲ್ಲಿ ವಾಸ ಮಾಡುತ್ತವೆ. ಹಾಗಾಗಿ ಇವುಗಳು ಸ್ಯಾಂಡ್ ಡಾಲರ್ ಎಂದು ಪರಿಚಿತವಾಗಿದೆ.
‘ಇವುಗಳ ಮೇಲ್ಮೈ ಸ್ವಲ್ಪ ಗಟ್ಟಿಯಾಗಿದ್ದು, ದೇಹದ ರಕ್ಷಣೆಗಾಗಿ ಸುತ್ತಲೂ ಚಿಕ್ಕ ಮುಳ್ಳುಗಳಿರುತ್ತವೆ. ಮರಳಿನ ಬಣ್ಣವನ್ನೇ ಇವು ಹೊಂದಿರುವುದರಿಂದ ಅಲ್ಲಿ ಸುಲಭವಾಗಿ ಗುರುತಿಸುವುದು ಕಷ್ಟ. ಆದರೆ, ಬಹುತೇಕ ಎಲ್ಲ ಮೀನುಗಳು ಮತ್ತು ದೊಡ್ಡ ಜಾತಿಯ ಸಮುದ್ರ ಏಡಿಗಳು ಇವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಸ್ಯಾಂಡ್ ಡಾಲರ್‌ಗಳಿಗೆ ಲಾರ್ವಾ, ಸೆಟ್ಲೆ ಮೀನಿನ ಸಣ್ಣ ಮರಿಗಳು, ಆಲ್ಗೆ ಮುಂತಾದವು ಆಹಾರ’ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದರು.
ಆರು ಕೋನಗಳು ಇರುವ 2 ರೂ. ಕಾಯಿನ್‍ನಂತಿರುವ ಈ ಮೀನುಗಳನ್ನು ನಾಣ್ಯದ ಮೀನು, ಡಾಲರ್ ಮೀನು ಎಂದು ಸ್ಥಳೀಯರು ಕರೆಯುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ