ಬೆಂಗಳೂರು :
ಸಂಸದ ಡಿ.ಕೆ.ಸುರೇಶ್ ಗೆ ಇಡಿ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಈಗಾಗಲೇ ವಿಚಾರಣೆಗೆ ಎಂದು ತೆರಳಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮೊದಲು ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಇದೀಗ ಸೋದರ ಡಿ.ಕೆ.ಸುರೇಶ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ.
ಲೋಕಸಭೆ ಚುನಾವಣೆ ಅಫಿಡೆವಿಟ್‍ನಲ್ಲಿ ಸುರೇಶ್ 388 ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದರು. ಅಲ್ಲದೆ ತಮ್ಮ ತಂದೆ ಕೆಂಪೇಗೌಡರ ಹೆಸರಿನಲ್ಲಿದ್ದ ಆಸ್ತಿಗಳ ಪೈಕಿ 27 ಆಸ್ತಿಗಳನ್ನು ಸುರೇಶ್ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಇದಲ್ಲದೆ ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳ ವಿಚಾರಣೆಗೊಳಪಟ್ಟಿದ್ದ ಡಿ.ಕೆ.ಶಿವಕುಮಾರ್ ಪುತ್ರಿ ಡಿ.ಎಸ್.ಐಶ್ವರ್ಯಗೆ ತಾವು 102 ಕೋಟಿ ಹಣವನ್ನು ಸಾಲ ನೀಡಿದ್ದಾಗಿ ಡಿ.ಕೆ.ಸುರೇಶ್ ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಬಹಿರಂಗಪಡಿಸಿದ್ದರು.
ಈ ಎಲ್ಲಾ ಕಾರಣಗಳಿಂದ ಡಿ.ಕೆ.ಸುರೇಶ್ ಗೆ ಇಡಿ ನೋಟಿಸ್ ನೀಡಿದ್ದು, ಸಮನ್ಸ್ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ಇಡಿ ಅಧಿಕಾರಿಗಳ ಮುಂದೆ ಮಂಗಳವಾರ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ಬಂಧನದಲ್ಲಿದ್ದು, ಇದೀಗ ಅವರ ಸಹೋದರ ಡಿ.ಕೆ.ಸುರೇಶ್ ಗೆ ನೋಟಿಸ್ ನೀಡಿರುವುದು ಡಿಕೆಶಿ ಕುಟುಂಬಕ್ಕೆ ಬಿಗ್ ಶಾಕ್ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ