ಕೊಪ್ಪಳ :
ಟ್ರ್ಯಾಕ್ಟರ್ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ.
ಹನುಮಪ್ಪ ಬೀರಪ್ಪನವರ (30), ಅವರ ಮಕ್ಕಳಾದ ಪ್ರಿಯಾಂಕಾ (4) ಮತ್ತು ಬೀರಪ್ಪ (2) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಹನುಮಪ್ಪ ಅವರು ಇಬ್ಬರು ಪುಟ್ಟ ಮಕ್ಕಳನ್ನು ಕರೆದುಕೊಂಡು ಸೂರ್ಯಕಾಂತಿ ಬೀಜಗಳನ್ನು ತುಂಬಿಕೊಂಡು ಹೊಲದಲ್ಲಿ ರಾಶಿ ಮಾಡಲು ಇವರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು.
ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಟ್ರ್ಯಾಕ್ಟರ್ ಮೇಲೆ ಬಿದ್ದಿತ್ತು ಎನ್ನಲಾಗಿದೆ. ಪರಿಣಾಮ ತಂದೆಯೊಂದಿಗೆ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ಈ ಸಂಬಂಧ ಕುಷ್ಟಗಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
