ಯಾದಗಿರಿ :
ಆಸ್ತಿ ವಿಚಾರ ಸಂಬಂಧ ತಂದೆ ಮಗನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ಸಮೀಪದ ಹತ್ತಿಕುಣಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಶರಣಪ್ಪ ಗಡ್ಡೀಮನಿ ಪೂಜಾರಿ (55), ಪುತ್ರ ಸಣ್ಣ ಸಾಬಣ್ಣ (29) ಕೊಲೆಯಾದವರಾಗಿದ್ದು, ಶುಕ್ರವಾರ ರಾತ್ರಿ ತಂದೆ ಹಾಗೂ ಮಗ ಬೇರೆ ಊರಿಗೆ ಹೋಗಿ ಬರುತ್ತಿದ್ದ ವೇಳೆ ಹತ್ತಿಕುಣಿಯ ಸರಕಾರಿ ತೋಟಗಾರಿಕೆ ಪ್ರದೇಶ ಹಾಗೂ ರಕ್ಷಿತ ಅರಣ್ಯ ಪ್ರದೇಶ ಬಳಿ ಕೊಲೆ ನಡೆದಿದೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ಗಡ್ಡೀಮನಿ ಪೂಜಾರಿ ಹಾಗೂ ಅವರ ಸಂಬಂಧಿಕರ ನಡುವೆ ಆಸ್ತಿ ವಿಚಾರದಲ್ಲಿ ಕಲಹ ಇತ್ತು ಎನ್ನಲಾಗಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಗಳೇ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ.
ಕೊಲೆಯಾದ ಶರಣಪ್ಪಗೆ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದು, ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಯಾದಗಿರಿ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ