ಬೆಂಗಳೂರು:
ಐಟಿ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸಿದವರ ಮೇಲೆ ಚುನಾವಣಾ ಆಯೋಗದ ದೂರಿನ ಹಿನ್ನೆಲೆಯಲ್ಲಿ ಮೈತ್ರಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕಳೆದ ತಿಂಗಳಲ್ಲಿ ಸಿಎಂ ಆಪ್ತ ಮಂಡ್ಯದ ಪುಟ್ಟರಾಜು ಸೇರಿದಂತೆ ಹಲವರ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ಖಂಡಿಸಿ, ಮೈತ್ರಿ ನಾಯಕರಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ರವರು ದಿಢೀರ್ ಬೆಂಗಳೂರಿನ ಐಟಿ ಕಚೇರಿಯ ಎದುರು ಪ್ರತಿಭಟನೆಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಪ್ರತಿಭಟನೆಯಿಂದಾಗಿ ಕೋಪಗೊಂಡಿದ್ದ ಐಟಿ ಅಧಿಕಾರಿಗಳು, ಮೈತ್ರಿ ನಾಯಕರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಐಟಿ ಅಧಿಕಾರಿಗಳ ದೂರನ್ನು ಚುನಾವಣಾ ಆಯೋಗ, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ತಿಳಿಸಿದ್ದರು. ಈ ಪತ್ರವನ್ನು ಪರಿಶೀಲಸಿರುವ ಪೊಲೀಸ್ ಮಹಾನಿರ್ದೇಶಕರು ಇದೀಗ ಮೈತ್ರಿ ನಾಯಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಕರ್ತವ್ಯ ನಿರ್ವಹಿಸಲು ಅಡ್ಡಿ ಎಂದು ದೂರು ನೀಡಲಾಗಿದೆ. ಅಲ್ಲದೇ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಐಟಿ ಇಲಾಖೆಯಿಂದಲೂ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ