1.5 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ!!!

ಬೆಂಗಳೂರು :

      ಬೆಂಗಳೂರಿನಲ್ಲಿ 1.5 ಕೋಟಿ ಮೌಲ್ಯದ ವಿವಿಧ ಬ್ರ್ಯಾಂಡ್‍ಗಳ ವಿದೇಶಿ ಸಿಗರೇಟ್‍ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

      ರಟ್ಟಿನ ಬಾಕ್ಸ್ ಗಳಲ್ಲಿ ವಿದೇಶಿ ಸಿಗರೇಟ್ ಗಳನ್ನು ತುಂಬಿ ಹತ್ತಿ ಬಟ್ಟೆ ಎಂದು ಪೆಟ್ಟಿಗೆಗಳ ಮೇಲೆ ಬರೆದು ‘ದುರಂತೋ ಎಕ್ಸ್ ಪ್ರೆಸ್ ರೈಲಿನಲ್ಲಿ’ ಹೌರಾದಿಂದ ಬೆಂಗಳೂರಿಗೆ ಸಾಗಣೆ ಮಾಡಲಾಗ್ತಿತ್ತು. ಗುಪ್ತಚರ ಅಧಿಕಾರಿಗಳು ನೀಡಿದ ಸುಳಿವಿನ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಸಿಗರೇಟ್ ಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ.

     ಯಶವಂತಪುರ ರೈಲು ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ರಟ್ಟಿನ ಬಾಕ್ಸ್ ಗಳನ್ನು ಪರಿಶೀಲಿಸಿದಾಗ 58 ರಟ್ಟಿನ ಬಾಕ್ಸ್ ಗಳಲ್ಲಿದ್ದ 5.86 ಲಕ್ಷ ಸಿಗರೇಟ್‍ಗಳು ಪತ್ತೆಯಾಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.

      ಹಾಗೆಯೇ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೈಸೂರಿಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ 15 ರಟ್ಟಿನ ಬಾಕ್ಸ್ ಗಳಲ್ಲಿದ್ದ, 1.5 ಲಕ್ಷ ಸಿಗರೇಟ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

      ಇನ್ನು ಈ ಸಿಗರೇಟ್‍ ಪ್ಯಾಕ್‍ಗಳಲ್ಲಿ ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿರುವ ಚಿತ್ರ ಮತ್ತು ಎಚ್ಚರಿಕೆ ಸಂದೇಶ ಇಲ್ಲದಿರುವುದರಿಂದ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ, ಇದನ್ನು ವಿದೇಶದಿಂದ ಅಕ್ರಮ ಸಾಗಣೆ ಮಾಡಿರುವ ಶಂಕೆಯಿದೆ ಎಂದು ನಗರ ಕಸ್ಟಮ್ಸ್‌ ಕಮಿಷನರ್‌ ಕಚೇರಿಯ ಹೆಚ್ಚುವರಿ ಕಮಿಷನರ್‌ ರಮಣರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link