ತುಮಕೂರು :
ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಹೆಸರಿನಲ್ಲಿ ಬಿಗ್ ಆಫರ್ ಘೋಷಿಸಿಕೊಂಡು ತಲೆ ಎತ್ತಿದ್ದ ಮಳಿಗೆಯೊಂದರ ಮಾಲೀಕರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಹಣ ತೊಡಗಿಸಿದ್ದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಭರತ್ ಹೋಮ್ ಅಪ್ಲೈಯನ್ಸ್ ಹೆಸರಿನಲ್ಲಿ ಮೆಘಾ ರಿಯಾಯಿತಿ ಕೊಡುಗೆ ಎಂದು ಹೇಳಿ 2.5 ಕೋಟಿಗೂ ಹೆಚ್ಚು ಹಣ ಲಪಟಾಯಿಸಿ ಪರಾರಿಯಾಗಿದ್ದು, ಈಗಷ್ಟೇ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿ ನೂರಾನಿ ಮಸೀದಿ ಎದುರು ಹೊಸದಾಗಿ ಈ ಶೋರೂಂ ಅನ್ನು ಪ್ರಾರಂಭಿಸಲಾಗಿತ್ತು. ಒಂದೂವರೆ ತಿಂಗಳಿನಿಂದ ಹೊಸ ವರ್ಷದ ಕೊಡುಗೆ ಎಂದು ಹೇಳಿಕೊಂಡು ಶೇ.10 ರಿಂದ 40% ರಿಯಾಯಿತಿ ಸಿಗಲಿದೆ. ಈ ಶೋರೂಂನಲ್ಲಿ ಎಲ್ಲಾ ರೀತಿಯ ಗೃಹಪಯೋಗಿ ವಸ್ತುಗಳು, ಸ್ಟೀಲ್ ಅಲ್ಮೆರಾ, ಸೋಫಾಸೆಟ್, ಡೈನಿಂಗ್ ಟೇಬಲ್, ಡ್ರೆಸ್ಸಿಂಗ್ ಟೇಬಲ್, ಎಲ್‍ಇಡಿ ಟಿವಿ, ರೆಫ್ರಿಜೇಟರ್ ಸೇರಿದಂತೆ ಎಲ್ಲಾ ಕಂಪನಿಯ ಮೊಬೈಲ್‍ಗಳು ದೊರೆಯುತ್ತವೆ. ಅದು ಕೂಡ ಸುಲಭ ಕಂತಿನಲ್ಲಿ ಸಿಗುತ್ತವೆ ಎಂಬುದಾಗಿ ಭಿತ್ತಿ ಪತ್ರಗಳನ್ನು ಹಂಚಲಾಗಿತ್ತು. ಉಪ್ಪಾರಹಳ್ಳಿ, ಶಿವಮೂಕಾಂಭಿಕಾ ನಗರ, ಚನ್ನಬಸವೇಶ್ವರ ಬಡಾವಣೆ, ಸಪ್ತಗಿರಿ ಬಡಾವಣೆ, ಚನ್ನಪ್ಪನ ಪಾಳ್ಯ, ಶ್ರೀನಿಧಿ ಬಡಾವಣೆ ಸುತ್ತ ಮುತ್ತಲ ಮನೆಗಳಿಗೆ ಕರಪತ್ರ ಹಂಚಲಾಗಿತ್ತು.
ಕಳೆದ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾದ ಈ ಶೋರೂಂನಲ್ಲಿ ಪ್ರಾರಂಭದಲ್ಲಿ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡಿ ಆಕರ್ಷಣೆ ಮಾಡಿದ್ದಾರೆ. ಇದಕ್ಕೆ ಮಾರುಹೋದ ಜನರು ಕಡಿಮೆ ಬೆಲೆಯಲ್ಲಿ ಗೃಹಬಳಕೆ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳು ದೊರೆಯುತ್ತವೆ ಎಂದು ಮುಗಿಬಿದ್ದು, ಮುಂಗಡವಾಗಿ ಹಣ ಪಾವತಿ ಮಾಡಿದ್ದಾರೆ. ಶೋರೂಂನ ಮಾಲೀಕರು ಮೊದಲು ಹಣ ಪಾವತಿ ಮಾಡಿಸಿಕೊಂಡು 10 ದಿನದ ನಂತರ ಬಂದರೆ ಅವರಿಗೆ ವಸ್ತು ದೊರೆಯುತ್ತದೆ ಎಂದು ರಸೀದಿಯನ್ನು ನೀಡಿ ನಂಬಿಸಲಾಗಿದೆ. ಇದನ್ನು ನಂಬಿದ ಜನರು ಒಬ್ಬರ ನಂತರ ಒಬ್ಬರು ಹೀಗೆ ನೂರಾರು ಸಂಖ್ಯೆಯಲ್ಲಿ ಜನರು ತಮಗೆ ತೋಚಿದಷ್ಟು ಹಣ ಸಂದಾಯ ಮಾಡಿ ರಸೀದಿಯನ್ನು ಪಡೆದಿದ್ದಾರೆ. ಆರಂಭಿಕ ದಿನಗಳಲ್ಲಿ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡುತ್ತಾ ಬಂದು ನಂಬಿಕೆ ಬರುವಂತೆ ಮಾಡಲಾಗಿದೆ. ಕ್ರಮೇಣ ವಸ್ತುಗಳನ್ನು ನೀಡುವುದು ತಡವಾಗುತ್ತಾ ಬಂದಿದೆ. ಜನವರಿ 10ರಂದು ಸಾಕಷ್ಟು ಮಂದಿಗೆ ವಸ್ತುಗಳನ್ನು ನೀಡಬೇಕಿತ್ತು. ಆದರೆ ರಾತ್ರೋ ರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ.
ಕಳೆದ ಮೂರು ದಿನಗಳಿಂದ ಶೋರೂಂಗೆ ಬೀಗ ಹಾಕಲಾಗಿದ್ದು, ನಿತ್ಯ ಚೀಟಿ ಪಡೆದ ಜನರು ತಮ್ಮ ವಸ್ತುಗಳನ್ನು ಪಡೆಯಲು ಮಳಿಗೆ ಮುಂದೆ ಬಂದು ಕಾದು ಕಾದು ಹೋಗುತ್ತಿದ್ದಾರೆ. ಶನಿವಾರದಂದು ಮಳಿಗೆ ಮಾಲೀಕನ ಮನೆಯ ಬಳಿ ಹೋದಾಗ ಮನೆ ಖಾಲಿ ಮಾಡಿಕೊಂಡು ಹೋಗಿರುವುದು ತಿಳಿದು ಬಂದಿದೆ. ಇದೀಗ ಮಳಿಗೆ ಮುಂಭಾಗದಲ್ಲಿ ಜನ ಸೇರಿಕೊಂಡು ತಮ್ಮ ವಸ್ತುಗಳನ್ನು ತಮಗೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ವ್ಯಾಪಾರ ಮಳಿಗೆಯ ಬ್ಯಾನರ್‍ಗೆ ಚಪ್ಪಲಿಯಿಂದ ಹೊಡೆಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಈ ಬಗ್ಗೆ ಕಳೆದ ಎರಡು ದಿನಗಳಿಂದಲೇ ಸಮೀಪದ ಜಯನಗರ ಠಾಣೆಗೆ ಮಾಹಿತಿ ರವಾನೆಯಾಗಿದೆ. ಶನಿವಾರ ಮಧ್ಯಾಹ್ನದಿಂದ ಜಯನಗರ ಪೆÇಲೀಸ್ ಠಾಣೆಗೆ ಭೇಟಿ ನೀಡಿದ ಮೋಸ ಹೋದ ಮತ್ತಷ್ಟು ಜನರು ತಾವು ಹಣ ಕಟ್ಟಿರುವುದಕ್ಕೆ ನೀಡಲಾದ ರಸೀದಿಯ ನಕಲಿ ಪ್ರತಿಯನ್ನು ಠಾಣೆಯಲ್ಲಿ ನೀಡಿದ್ದಾರೆ. ಸರಿಸುಮಾರು 150ಕ್ಕೂ ಜನರಿಂದ ರಸೀದಿಗಳನ್ನು ಪಡೆದಿದ್ದು, ಭಾನುವಾರ ಹಿರಿಯ ಅಧಿಕಾರಿಗಳು ಬಂದ ನಂತರ ಈ ಬಗ್ಗೆ ವಿಚಾರಣೆ ಮಾಡಿ, ಅಂಗಡಿ ಮಾಲೀಕನ ಪತ್ತೆಗೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸದಾಗಿ ಯಾರೆ ಬಂದು ಕಡಿಮೆ ಬೆಲೆಗೆ ಉತ್ತಮ ವಸ್ತುಗಳನ್ನು ನೀಡುತ್ತೇವೆ ಎನ್ನುತ್ತಿದ್ದಂತೆ ಆ ಬಗ್ಗೆ ಆಲೋಚನೆ ಮಾಡದೆ ಹಣ ಸಂದಾಯ ಮಾಡಬಾರದು. ಖರೀದಿಸಲು ಮುಂದಾಗಬಾರದು. ಮುಂಗಡ ಹಣ ನೀಡಿ ಮೋಸ ಹೋಗಬಾರದು, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ ಎನ್ನುತ್ತಾರೆ ಪೊಲೀಸರು.
ಕಡಿಮೆ ಬೆಲೆಯಲ್ಲಿ ಗೃಹ ಬಳಕೆ ವಸ್ತುಗಳು ದೊರೆಯುತ್ತವೆ ಎಂಬುದಾಗಿ ಹೇಳಿದ್ದನ್ನು ಕೇಳಿ 17,550 ರೂಗಳನ್ನು ಸಂದಾಯ ಮಾಡಿದ್ದೇವೆ. ಜ.10ರಂದು ವಸ್ತುಗಳನ್ನು ನೀಡುತ್ತೇವೆ ಎಂದು ಹೇಳಿದ್ದರು. ಅದರಿಂದ ನಿನ್ನೆ ವಾಹನ ಸಮೇತ ಇಲ್ಲಿಗೆ ಬಂದರೆ ಇಲ್ಲಿ ಮಳಿಗೆ ಬಂದ್ ಆಗಿತ್ತು. ಜನರನ್ನು ವಿಚಾರಿಸಿದರೆ ಪರಾರಿಯಾಗಿರುವುದು ತಿಳಿದುಬಂದಿದೆ.
ರಮೇಶ್, ಮೋಸಹೋದ ವ್ಯಕ್ತಿ
ನಮ್ಮ ಸುತ್ತ ಮುತ್ತಲಿನ ಅನೇಕ ಜನ ಕಳೆದ ಹದಿನೈದು ದಿನಗಳಿಂದ ಆ ಅಂಗಡಿಗೆ ಹೋಗಿ ಸೋಫಾ ಸೆಟ್, ಟೀಪಾಯಿಗೆ ಆರ್ಡ್‍ರ್ ಕೊಟ್ಟು ಬಂದಿದ್ದರು. ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ. ನೀವು ತೆಗೆದುಕೊಳ್ಳಿ ಎಂದು ಹೇಳಿದ್ದರು. ಆದರೆ ವಿಚಾರಿಸಿದ ನಂತರವೇ ಇಲ್ಲಿ ಹಣ ಕೊಡಬೇಕೆಂದು ತೀರ್ಮಾನಿಸಿದ್ದೆ. ನನಗೆ ಈ ಬಗ್ಗೆ ಅನುಮಾನವಿತ್ತು. ಅದರಂತೆಯೆ ಆಗಿದೆ. ಜನರು ಇಂತಹ ಶೋರೂಂಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
-ಮಂಜುಳ, ಶಿವಮೂಕಾಂಭಿಕಾ ನಗರ