ಹಿರಿಯ ನಾಗರಿಕರಿಗೆ ನವೆಂಬರ್ 1 ರಿಂದ 1000 ರೂ ಮಾಶಾಸನ

ಬೆಂಗಳೂರು:

     ಈ ವರ್ಷದಿಂದಲೇ ಹಿರಿಯ ನಾಗರಿಕರಿಗೆ 5 ಸಾವಿರ ರೂ. ವೇತನ ನೀಡುವ ಆಶಯ ಇತ್ತು, ಆದರೆ ಸರ್ಕಾರದಲ್ಲಿ ಸಾಕಷ್ಟು ಸವಾಲುಗಳಿವೆ ಹಾಗಾಗಿ ನವೆಂಬರ್ 1 ರಿಂದ ಒಂದು ಸಾವಿರ ರೂ ಮಾಶಾಸನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

     ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಪ್ರತಿವರ್ಷ ಒಂದು ಸಾವಿರ ರೂ ಮಾಸಾಶನ ಹೆಚ್ಚಿಸಿ ಸಮ್ಮಿಶ್ರ ಸರ್ಕಾರದ ಅವಧಿ ಮುಗಿಯುವುದರೊಳಗೆ ಪ್ರತಿ ತಿಂಗಳು ಐದು ಸಾವಿರ ರೂ ಮಾಸಾಶನ ದೊರೆಯುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

     ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಆನ್‍ಲೈನ್ ಮೂಲಕ ಪಡೆಯುವ ವೆಬ್ ಸೈಟ್ ಲೊಕಾರ್ಪಾಣೆ ಮಾಡಿ ಮಾತನಾಡಿದ ಅವರು, ಸಂಧ್ಯಾ ಸುರಕ್ಷಾ ಯೋಜನೆಯಡಿ ಹಿರಿಯ ನಾಗರಿಕರಿಗೆ 500 ರೂಪಾಯಿ ಮಾಸಾಶನವನ್ನು ಸರ್ಕಾರ ನೀಡುತ್ತಿತ್ತು. ಆದರೆ ಅದನ್ನು ಈ ವರ್ಷದಿಂದ 1000 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು.

     ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಪ್ರತಿ ತಿಂಗಳಿಗೆ ಒಂದು ಸಾವಿರ ರೂ. ಸಿಗಲಿದೆ. ಮುಂದಿನ ವರ್ಷ ಅದನ್ನು 2ಸಾವಿರ, 3ನೇ ವರ್ಷ 3 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುತ್ತಾ 5 ವರ್ಷ ಪೂರ್ಣಗೊಳ್ಳುವುದರೊಳಗೆ 5 ಸಾವಿರ ರೂ. ದೊರೆಯುವಂತೆ ಮಾಡಲಾಗುವುದು ಎಂದು ವಿವರಿಸಿದರು.

     ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಐದು ಸಾವಿರ ರೂ ಮಾಸಾಶನ ನೀಡುವ ಇಚ್ಛೆ ನನಗೆ ಹಾಗೂ ನಮ್ಮ ಪಕ್ಷಕ್ಕೆ ಇತ್ತು. ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೂ ಪ್ರಸ್ತಾಪ ಮಾಡಲಾಗಿತ್ತು. ಆದರೆ ಈ ಬಾರಿ ಸರ್ಕಾರದ ಮುಂದೆ ಅನೇಕ ಸವಾಲುಗಳು ಎದುರಾದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿರಲಿಲ್ಲ ಎಂದರು.

    ಕಾಂಗ್ರೆಸ್‍ನೊಂದಿಗೆ ಮೈತ್ರಿ ಸರ್ಕಾರ ರಚಿಸಿರುವುದರಿಂದ ಒಂದೇ ವರ್ಷದಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ಐದು ವರ್ಷಗಳಲ್ಲಿ ಹಂತ-ಹಂತವಾಗಿ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ