ವಿಘ್ನ ವಿನಾಶಕನಿಗೇ ಕೊರೋನಾ ವಿಘ್ನ..!

ತುಮಕೂರು :

      ಯಾವುದೇ ಶುಭಕಾರ್ಯಕ್ಕೂ ಮೊದಲು ಜನರು ತಾವು ಮಾಡುವ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ವಿಘ್ನ ವಿನಾಶಕ ವಿನಾಯಕನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೇ ಕಳೆದ ಎರಡು ವರ್ಷಗಳ ಗೌರಿ-ಗಣೇಶ ಚತುರ್ಥಿಯ ಸಂದರ್ಭಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಕೂರಿಸುವುದಕ್ಕೆ ಕೊರೋನಾ ವೈರಾಣು ತಂದೊಡ್ಡಿರುವ ನಿರ್ಬಂಧ ಗೌರಿ ಮತ್ತು ವಿಘ್ನ ವಿನಾಶಕನ ಪ್ರತಿಷ್ಠಾಪನೆಗೆ ಅಡ್ಡಿಯಾಗಿ ಪರಿಣಮಿಸಿದೆ.

       ಮೂರನೇ ಅಲೆಯ ಭೀತಿ, ಕಳೆದ ವರ್ಷಕ್ಕಿಂತ ಈ ವರ್ಷ ಗಣೇಶನ ಮೂರ್ತಿಯ ಬೆಲೆ ಸಾಕಷ್ಟು ಹೆಚ್ಚಳವಾಗಿರುವುದು, ಸರ್ಕಾರದ ಮಾರ್ಗಸೂಚಿಯ ಭಯ, ಮುಂತಾದ ಕಾರಣಗಳಿಂದಾಗಿ ಈ ವರ್ಷ ಮೋದಕಪ್ರಿಯನ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ. ಇದರಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಬದುಕಿಗಿಷ್ಟು ಆರ್ಥಿಕ ಚೈತನ್ಯ ಪಡೆಯುತ್ತಿದ್ದ ಕುಶಲಕರ್ಮಿ ಕುಂಬಾರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ.

ಮೂರ್ತಿ ಕೊಳ್ಳಲು ಜನರ ನಿರಾಸಕ್ತಿ :

      ಕೋವಿಡ್ ಸಂಕಷ್ಟದ ನಡುವೆ ಅಗತ್ಯ ವಸ್ತುಗಳ ಬೆಲೆ, ಗ್ಯಾಸ್ ದರ ಹೆಚ್ಚಳವಾಗಿದ್ದು, ಜನರು ಜೀವನ ನಡೆಸುವುದೇ ದುಸ್ಥರವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧರಿಲ್ಲ. ಹಾಗೂ ಮನೆಯಲ್ಲಿ ಗಣೇಶನನನ್ನು ಕೂರಿಸಿದರೇ ಅಷ್ಟೇ ಸಾಲುವುದಿಲ್ಲ. ಗಣಪತಿಯ ಅಲಂಕಾರ, ಹೂವು, ಹಣ್ಣು, ಕಡುಬು ಇತರೆ ಖಾದ್ಯಗಳ ತಯಾರಿಗೆ ಹಣ ಖರ್ಚಾಗುತ್ತದೆ. ಅಲ್ಲದೇ ಮನೆಯಲ್ಲಿ ಕೂರಿಸಿದ ಗಣೇಶನನ್ನು ನೋಡಲು ನೆರೆಹೊರೆಯವರು, ಮಕ್ಕಳ ಸ್ನೇಹಿತರು ಬರುತ್ತಾರೆ. ಕೊರೋನಾ ಮೂರನೆಯ ಅಲೆಯ ಈ ಹೊತ್ತಿನಲ್ಲಿ ಇಲ್ಲದ ಉಸಾಬರಿಯನ್ನು ಮೈಮೇಲೆ ಎಳೆದುಕೊಳ್ಳುವುದೇಕೆ, ಮುಂದಿನ ವರ್ಷ ಎಲ್ಲಾ ಸರಿಯಾದರೇ ಜೋರಾಗಿ ಹಬ್ಬ ಮಾಡಿದರಾಯಿತು ಎಂದು ಜನರು ಗಣೇಶನ ಮೂರ್ತಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ದುಬಾರಿಯಾದ ಗಣಪನ ಬೆಲೆ :

      ತುಮಕೂರು ನಗರದ ಟೌನ್‍ಹಾಲ್ ವೃತ್ತ, ಜೆಸಿ ರಸ್ತೆ, ಅರಳೆಪೇಟೆ ರಸ್ತೆ ಮುಂತಾದ ಕಡೆಗಳಲ್ಲಿ ಗಣೇಶನ ಮೂರ್ತಿಗಳನ್ನು ಮಾರಾಟಕ್ಕೆ ತಂದಿರುವ ಕುಂಬಾರರನ್ನು ಮಾತನಾಡಿಸಿದಾಗ ಕಳೆದ ಎರಡು ವರ್ಷಗಳ ಹಿಂದೆ ಇದ್ದ ಬೆಲೆಗೂ ಈ ವರ್ಷದ ಬೆಲೆಗೂ ಸಾಕಷ್ಟು ವ್ಯತ್ಯಾಸವಾಗಿದ್ದು, ಗಣಪನ ಬೆಲೆಯಲ್ಲಿ ದುಬಾರಿಯಾಗಿದೆ. 4 ಅಡಿಯ ಮೂರ್ತಿಗೆ ಈ ಹಿಂದೆ 3500 ರೂ. ಇದ್ದ ದರ ಈ ವರ್ಷ 6500 ರೂ.ಗೆ ಹೆಚ್ಚಳವಾಗಿದೆ. 80-100 ರೂ.ಗೆಲ್ಲಾ ಸಿಗುತ್ತಿದ್ದ ಗಣೇಶನ ಚಿಕ್ಕ ಮೂರ್ತಿಗಳು ಈ ವರ್ಷ 150-200 ರೂ.ಗೆ ದುಬಾರಿಯಾಗಿವೆ. ಬಣ್ಣದ ಬೆಲೆ ಏರಿಕೆಯಾಗಿರುವುದು, ಸಾಗಣಿಕೆ ವೆಚ್ಚ, ಮೂರ್ತಿ ತಯಾರಿಸುವ ಕುಶಲಕರ್ಮಿಗಳ ವೇತನ ಹೆಚ್ಚಳದಿಂದಾಗಿ ಗಣಪನ ಮೂರ್ತಿಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಜನರು ಚಿಕ್ಕ ಮೂರ್ತಿಗಳನ್ನು ಕೊಳ್ಳಲು ಆಸಕ್ತಿ ತೋರುತ್ತಿದ್ದು, ದೊಡ್ಡ ಮೂರ್ತಿಗಳ ವ್ಯಾಪಾರಕ್ಕೆ ಹಿನ್ನೆಡೆಯಾಗಿದೆ.

ಸಂಪ್ರದಾಯಕ್ಕಷ್ಟೇ ಹಬ್ಬ :

      ಕೊರೋನಾ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಲು ಸಂಘಟನೆಗಳು, ಯುವಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಕೆಲವು ಮನೆಗಳಲ್ಲಿ ಈ ವರ್ಷ ಬೆಳ್ಳಿ ಗಣಪತಿ, ಪರಿಸರ ಗಣಪತಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯ ನೆರವೇರಿಸಲು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಕೊರೋನಾ ಕಾಟದ ದಟ್ಟಕಾರ್ಮೋಡವೇ ಕವಿದಂತಾಗಿದೆ.

ಶಾಮಿಯಾನ, ವಾದ್ಯದವರಿಗೂ ಕೆಲಸವಿಲ್ಲ :

      ಮೂರನೇ ಅಲೆಯ ಭೀತಿ ಹಾಗೂ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮದ ಭಯಯಿಂದಾಗಿ ಸಂಘ-ಸಂಸ್ಥೆಗಳು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅಷ್ಟೊಂದು ಮಹತ್ವ ಕೊಡುತ್ತಿಲ್ಲ. ಇದರಿಂದಾಗಿ ಗಣಪತಿಮೂರ್ತಿ ತಯಾರಕರು, ಶಾಮಿಯಾನದವರು, ಡೆಕೊರೇಷನ್‍ನವರು ಮತ್ತು ನಾಸೀಕ್‍ಡೋಲು ಸೇರಿದಂತೆ ವಾದ್ಯದವರು, ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಕೆಲಸ ಮಾಡುತ್ತಿದ್ದ ಬಾಣಸಿಗರು ಕೆಲಸವಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗಿದೆ.

ಕುಂಬಾರಿಗೆ ಸರ್ಕಾರದ ನೆರವು ಅಗತ್ಯ :

      ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಗಣೇಶಮೂರ್ತಿ ತಯಾರಿಕರಿಗೆ 10 ಸಾವಿರ ರೂ.ಗಳ ಸಹಾಯಧನ ಘೋಷಿಸುವ ಮೂಲಕ ತಮಿಳುನಾಡು ಸರ್ಕಾರ ಗಣಪತಿ ಮೂರ್ತಿ ತಯಾರಕ ಕಲಾವಿದರ ನೆರವಿಗೆ ಧಾವಿಸಿದೆ. ರಾಜ್ಯದಲ್ಲೂ ಗಣೇಶಮೂರ್ತಿ ತಯಾರಿಸುವ ಸಾವಿರಾರು ಕುಂಬಾರ ಕುಟುಂಬಗಳಿದ್ದು, ಕಳೆದ ಎರಡು ವರ್ಷಗಳಿಂದ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯನ್ನು ಅನುಸರಿಸಿ ಕೋವಿಡ್ ಕಷ್ಟದಲ್ಲಿರುವ ಕುಂಬಾರರ ಬದುಕಿಗೆ ಆಸರೆಯಾಗಬೇಕಿದೆ.

      ಸರ್ಕಾರ ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಒಂದು ದಿನ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿತ್ತು. ಇದರಿಂದ ತಯಾರಿಸಿದ ಸಾವಿರಾರು ಮೂರ್ತಿಗಳು ಮಾರಾಟವಾಗದೆ ಉಳಿದು, ಕುಂಬಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದ್ದರು. ಈ ಬಾರಿ ಸರ್ಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೆಲ ಷರತ್ತುಗಳನ್ನು ವಿಧಿಸಿ, ಅನುಮತಿ ನೀಡಿದೆ. ಇದು ನಿಜಕ್ಕು ಕುಂಬಾರ ಸಮುದಾಯಕ್ಕೆ ಮರಳುಗಾಡಿನಲ್ಲಿ ಸಿಹಿ ನೀರು ಸಿಕ್ಕಂತಾಗಿದೆ. ಮೂರ್ತಿಗಳ ಮಾರಾಟ ಯಾವ ರೀತಿ ಆಗುತ್ತದೆ ಎಂಬುದನ್ನು ಇನ್ನೆರೆಡು ದಿನ ಕಾದು ನೋಡಬೇಕಿದೆ.

-ಬಸವರಾಜು, ಗೌರವಾಧ್ಯಕ್ಷರು, ರಾಜ್ಯ ಕುಂಬಾರರ ಸಂಘ

      ಕಳೆದ ಎರಡು ವರ್ಷಗಳಿಂದಲೂ ಗಣೇಶ ಮೂರ್ತಿಗಳ ವ್ಯಾಪಾರಕ್ಕೆ ಹಿನ್ನೆಡೆಯಾಗಿದೆ. ಸರ್ಕಾರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದ್ದರೂ ಸಹ ಕೊರೋನಾ ಕಾರಣದಿಂದಾಗಿ ಸರಿಯಾದ ದುಡಿಮೆ ಇಲ್ಲದೇ ಜನರ ಬಳಿ ದುಡ್ಡಿಲ್ಲ. ಇದರ ಜೊತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನರು ಮೂರ್ತಿ ಕೊಳ್ಳಲು ಮುಂದೆ ಬರುತ್ತಿಲ್ಲ.

-ಮೋಹನ್, ಗಣಪತಿ ಮೂರ್ತಿಗಳ ಮಾರಾಟಗಾರ, ತುಮಕೂರು

 -ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap