ಚಿಕ್ಕಬಳ್ಳಾಪುರ:
ಏನಾದರೂ ವಿಶೇಷ ಸಾಧನೆ, ಸೇವೆ ಮಾಡಿದರೆ ಮಾತ್ರ ಸಮಾಜ ನಮ್ಮನ್ನು ನೆನಪಿಸುತ್ತದೆ. ಅದ್ದರಿಂದ ನಮ್ಮ ಸಾಧನೆಗೆ ಕಾರಣವಾಗುವ ಗುರುಗಳನ್ನು ಮರೆಯಬೇಡಿ. ಈಗಿನ ಗೂಗಲ್ ನಿಂದಲೂ ಗುರುವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.
ಅವರು ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮದ ಶ್ರೀ ಸತ್ಯಾ ಸಾಯಿ ವಿದ್ಯಾಸಂಸ್ಥೆಗಳ ಆವರಣದ ಪ್ರೇಮಾಮೃತಂ ಮಹಲ್ ನಲ್ಲಿ ನಡೆದ ಶ್ರೀ ಸತ್ಯಸಾಯಿಬಾಬಾರ 93 ನೇ ಜನ್ಮದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಭಾಗವಹಿಸಿದ್ದರು. ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿ ಮಾತನಾಡಿದರು.
ಸತ್ಯ ಸಾಯಿಬಾಬಾರ ಜೀವನ, ಸೇವಾ ಮನೋಭಾವ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇಂದಿನ ಯುವಕರು ತಮ್ಮ ಜೀವನದಲ್ಲಿ ಎಂದಿಗೂ 5 ವಿಷಯಗಳನ್ನ ಮರೆಯಬಾರದು. ಹೆತ್ತ ತಂದೆ-ತಾಯಿ, ತಾವು ಹುಟ್ಟಿದ ಊರು, ತಮ್ಮ ದೇಶ ಹಾಗೂ ವಿದ್ಯೆ ಕಲಿಸುವ ಗುರುಗಳನ್ನ ಎಂದಿಗೂ ಮರೆಯಬಾರದು. ಇದರ ಜೊತೆ ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನು ಮಾತ್ರ ಮರೆಯಬಾರದು ಎಂದು ಹೇಳಿದರು.
ರಾಜ್ಯಪಾಲ ವಜುಬಾಯಿ ವಾಲಾ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಕ್ರಿಕೆಟಿಗ ಸುನೀಲ್ ಗವಾಸ್ಕರ್, ಋಷಿಕೇಶದ ಚಿದಾನಂದ ಸರಸ್ವತಿ ಸ್ವಾಮೀಜಿ, ಸತ್ಯಸಾಯಿ ಲೋಕ ಸೇವಾ ಸಂಸ್ಥೆ ಮುಖ್ಯ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ, ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ್ ನಾಯ್ಡು ಉಪಸ್ಥಿತರಿದ್ದರು.