ತುಮಕೂರು:
ಒಳ ಒಪ್ಪಂದದ ಜನಕ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ವಚನ ಭ್ರಷ್ಟತೆ, ಬಾಂಡ್ ಪೇಪರ್ ಸಂಸ್ಕøತಿ ಪ್ರಾರಂಭವಾಗಿದ್ದೇ ಹೆಚ್.ಡಿ.ಕುಮಾರಸ್ವಾಮಿಯವರಿಂದ, ಇಂತಹವರು ಸಿದ್ದರಾಮಯ್ಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕರೂ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ಮಸೂದೆ ಸೇರಿದಂತೆ ಹಲವು ಯೋಜನೆಗಳು ಜನ ವಿರೋಧಿಯಾಗಿವೆ, ಹೊರಗೆ ವಿರೋಧಿಸಿ ಒಳಗೆ ಬೆಂಬಲಿಸುವ ಜೆಡಿಎಸ್ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು .
ಯಾವುದೇ ಪಕ್ಷದಲ್ಲಿದ್ದರೂ ಆಂತರಿಕ ಬೇಗುದಿ ಇದ್ದೇ ಇರುತ್ತದೆ ಎನ್ನುವುದನ್ನು ಎಲ್ಲರಿಗೂ ಅರ್ಥ ಮಾಡಿಕೊಳ್ಳಬೇಕು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವು ಸೋಲಲು ತಮ್ಮ ಪಕ್ಷದ ಮುಖಂಡರೇ ಕಾರಣ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ, ಅದನ್ನೇ ಕಾರಣ ಮಾಡಿಕೊಂಡು ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
2004ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಆದರೆ ಒಪ್ಪಂದದಂತೆ 20 ತಿಂಗಳ ನಂತರೆ ಬಿಜೆಪಿಯವರಿಗೆ ಅಧಿಕಾರ ಕೊಡಲಿಲ್ಲ, ನಾನು ಆಗ ಜೆಡಿಎಸ್ ಶಾಸಕರಾಗಿ ಕುಮಾರಸ್ವಾಮಿ ಅವರೊಂದಿಗೆ ಇದ್ದೆ. ಜೆಡಿಎಸ್‍ನ ಅನೇಕ ಶಾಸಕರು ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲು ಕೇಳಿಕೊಂಡರೂ ಒಪ್ಪಲಿಲ್ಲ, ಆಗ ನಾವೆಲ್ಲಾ ಶಾಸಕ ಸ್ಥಾನ ಕಳೆದುಕೊಂಡೆವು. ವಚನ ಭ್ರಷ್ಟತೆ ಎಲ್ಲಿಂದ ಪ್ರಾರಂಭವಾಯಿತು ಎನ್ನುವುದು ಜನರಿಗೆ ಗೊತ್ತಿದೆ ಎಂದು ಹೇಳಿದ ಕೆ.ಎನ್.ಆರ್, ರಾಜಕಾರಣದಲ್ಲಿ ನಿರಂತರವಾಗಿ ನಡೆಯುವ ಪ್ರಕ್ರಿಯೆಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ಈಗ ಮಾತನಾಡುವುದು ಅನವಶ್ಯಕ, ಸೋಲಿಗೆ ಕಾರಣವನ್ನು ಹೇಳುತ್ತಿರುವುದನ್ನೇ ಟೀಕೆ ಮಾಡುತ್ತಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರಿಂದಲೇ ವಚನ ಭ್ರಷ್ಟತೆ, ಬಾಂಡ್ ಪೇಪರ್ ಸಂಸ್ಕೃತಿ ಪ್ರಾಂಭವಾಯಿತು, ಇಪ್ಪತ್ತು ತಿಂಗಳಲ್ಲಿ ಶಾಸಕರ ಅಧಿಕಾರವನ್ನು ಕಳೆದವರು ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಮಧುಗಿರಿಯಲ್ಲಿ ಹುಲಿನಾಯ್ಕರ್ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಿ, ನನ್ನನ್ನು ಸೋಲಿಸಲು ಒಳಸಂಚು ಮಾಡಿದ್ದು, ಕುಮಾರಸ್ವಾಮಿ ಅವರೇ ಅಲ್ಲವೇ? ಕುಮಾರಸ್ವಾಮಿ ಅವರು ಹೇಳದೇ ಇದ್ದರೆ ಯಡಿಯೂರಪ್ಪ ಟಿಕೆಟ್ ಕೊಡುತ್ತಿದ್ದರಾ? ಎಂದು ಪ್ರಶ್ನಿಸಿದರು.
ಒಳಸಂಚಿನ ಸ್ಕೂಲಿಗೆ ಕುಮಾರಸ್ವಾಮಿ ಅವರೇ ಪ್ರಿನ್ಸಿಪಾಲ್, ಚಾಮುಂಡೇಶ್ವರಿಯಲ್ಲಿ ಗೋಪಾಲಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಕುಮಾರಸ್ವಾಮಿ ಅವರ ಶಿಫಾರಸ್ಸೇ ಕಾರಣ, ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕಿದೆ, ಕುಮಾರಸ್ವಾಮಿ ಪದೇ ಪದೇ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ತೊರೆಯುವವರು, ಕಾಂಗ್ರೆಸ್‍ಗೆ ಬರುವವರು ಇದ್ದಾರೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಎನ್‍ಆರ್ ನನ್ನ ಗಾಡ್ ಫಾದರ್ :
ಕೆ.ಎನ್.ರಾಜಣ್ಣನವರು ನನ್ನ ಗಾಡ್ ಫಾದರ್. ನಮ್ಮ ತಂದೆ ಕಾಲದಿಂದಲೂ ನಮಗೆ ಆತ್ಮೀಯರು. ನಾನು ವಿಧಾನಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದಾಗ ನನ್ನ ಗೆಲುವಿಗೆ ಸಹಕರಿಸಿದ್ದರು. ಈಗ ಇಬ್ಬರೂ ಬೇರೆಬೇರೆ ಪಕ್ಷದಲ್ಲಿದ್ದರೂ ಅದೇ ವಿಶ್ವಾಸವಿದೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ನನಗೆ ತಿಳಿದ ವಿಚಾರದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಒಪ್ಪಂದ ಆಗಿದ್ದು ಸತ್ಯ, ಇದರಲ್ಲಿ ಮುಚ್ಚುಮರೆ ಇಲ್ಲ, ಸಿದ್ದರಾಮಯ್ಯರನ್ನು ಸೋಲಿಸಲು ಒಳಒಪ್ಪಂದ ಕಾರಣ, ತುಮಕೂರು ಲೋಕಸಭೆಯಲ್ಲಿ ದೇವೇಗೌಡರು ಸೋಲಲು ನಮ್ಮದೇ ಪಕ್ಷದ ಮುಖಂಡರೇ ಕಾರಣ, ನಮ್ಮ ಮಾತನ್ನು ಕೇಳಿದ್ದರೆ ದೇವೇಗೌಡರು ಗೆಲ್ಲುತ್ತಿದ್ದರು. ದೇವೇಗೌಡರು ಗೆಲುವಿನ ಅತಿಯಾದ ನಂಬಿಕೆ ಇಟ್ಟುಕೊಂಡಿದ್ದರು, ಯಾವುದೋ ಮುಖಂಡನನ್ನು ನಂಬಿಕೊಂಡು ನಮ್ಮ ಮಾತನ್ನು ಕಡೆಗಣಿಸಿದರು ಅದಕ್ಕಾಗಿ ಸೋಲು ಕಂಡರು, ಇರೋ ವಿಚಾರವನ್ನು ಕುಮಾರಸ್ವಾಮಿ ಹೇಳಿಕೊಳ್ಳಲಿ ಎಂದು ಹೇಳಿದರು.
ಬಿಜೆಪಿ ಸರ್ಕಾರ ಬೀಳೋದಕ್ಕೆ ಬಿಡೋದಿಲ್ಲ ಎಂದು ಜೆಡಿಎಸ್ ವರಿಷ್ಠರೇ ಹೇಳಿದ್ದಾರೆ, ಈ ಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದ ಎಸ್.ಆರ್.ಶ್ರೀನಿವಾಸ್, ಬಿಜೆಪಿಯೊಂದಿಗೆ ನಾವು ಜೆಡಿಎಸ್ ಸೇರ್ಪಡೆಗೊಂಡಿದೆ, ಈವರೆಗೆ ನಾನು ಬಿಜೆಪಿ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ, ಈಗ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ನಾನು ವೈಯಕ್ತಿಕವಾಗಿ ಹೋಗುವುದಿಲ್ಲ, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವುದಿಲ್ಲ ಎಂದು ಹೇಳಿದರು.
ಸಿರಾ ಉಪಚುನಾವಣೆಯಲ್ಲಿ ಮುಖಂಡರು ಹದಿನೈದು ದಿನ ಇದ್ದಾಗ ಪ್ರಚಾರಕ್ಕೆ ಬಂದರು, ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಆಗಲೇ ದೇವೇಗೌಡರಿಗೆ ಹೇಳಿದ್ದೇ ಎಂದರು, ರಾಜಣ್ಣ ಅವರೊಂದಿಗೆ ನನ್ನದು ಹಳೇಯ ಸಂಬಂಧ, ಅವರೇ ನನ್ನ ಗಾಡ್ ಫಾದರ್. ಇವರು ಕರೆದದ್ದಕ್ಕೆ ಮನೆಗೆ ಬಂದಿದ್ದೇನೆ, ರಾಜಕೀಯ ಕಾರಣಕ್ಕಾಗಿ ಅಲ್ಲ ಎಂದು ಹೇಳಿದರು.
ದೇವೇಗೌಡರ ಬಗ್ಗೆ ಗೌರವವಿದೆ :
2004ರಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಶಾಸಕರಾಗಲು ದೇವೇಗೌಡರು ನನಗೆ ಅವಕಾಶ ಮಾಡಿಕೊಟ್ಟರು. ಆ ಋಣ ನನ್ನ ಮೇಲಿದೆ. ಆ ಕಾರಣಕ್ಕೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಬೆಂಬಲಿಸಲು ಇಚ್ಚಿಸಿದ್ದೆ. ಆದರೆ, ದೇವೇಗೌಡರು ನನ್ನನ್ನು ಮತ ಕೇಳಲು ಬರಲಿಲ್ಲ. ಅವರು ಬರುವುದು ಬೇಡ, ಒಂದು ಫೋನ್ ಮಾಡಿ ನನ್ನನ್ನು ಕರೆದಿದ್ದರೆ ನಾನೇ ಹೋಗಿ ಅವರನ್ನು ಬೆಂಬಲಿಸುತ್ತಿದ್ದೆ. ಅದಕ್ಕೆ ಅವಕಾಶ ಆಗಲಿಲ್ಲ, ಆಗ ಜಿ.ಎಸ್.ಬಸವರಾಜು ನಮ್ಮ ಮನೆಗೆ ಬಂದು ಸಹಕಾರ ಕೇಳಿದರು, ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದೆ. ಬಿಜೆಪಿ ಎನ್ನುವ ಕಾರಣಕ್ಕೆ ಅಲ್ಲ, ಬಸವರಾಜು ಅವರೊಂದಿಗಿನ ವಿಶ್ವಾಸದ ಕಾರಣಕ್ಕೆ ಬೆಂಬಲ ನೀಡಿದೆ ಎಂದು ಕೆ.ಎನ್.ರಾಜಣ್ಣ ಹೇಳಿದರು.
ದೇವೇಗೌಡರ ರೈತಪರ ಕೆಲಸ, ಈ ವಯಸ್ಸಿನಲ್ಲೂ ಅವರ ಹೋರಾಟ ಮೆಚ್ಚುವಂತಾದ್ದು, ಆದರೆ, ಗೋಹತ್ಯೆ ನಿಷೇಧ ಮಸೂದೆ ಬಗ್ಗೆ ಒಳಗೊಂಡು, ಹೊರಗೊಂದು ಹೇಳುವ ವಿಚಾರದಲ್ಲಿ ನನ್ನ ಆಕ್ಷೇಪವಿದೆ ಎಂದರು.
ಅಭಿವೃದ್ಧಿಗೆ ಆದ್ಯತೆ ಇರಲಿ
ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿಯತ್ತಾ ಗಮನ ನೀಡಬೇಕು. 2018 ಡಿಸೆಂಬರ್‍ನಲ್ಲಿ ಗುಬ್ಬಿಯ ಹೆಚ್‍ಎಎಲ್ ಘಟಕದಲ್ಲಿ ತಯಾರಾಗುವ ಹೆಲಿಕಾಪ್ಟರ್ ಹಾರುತ್ತದೆ ಎಂದು ಹೇಳಲಾಗಿತ್ತು. ಆದರೆ, ಹಾರಿಸಲು ಇಲ್ಲಿಯವರೆಗೂ ಆಗಿಲ್ಲ, ಜಿಲ್ಲೆಯ ಅಭಿವೃದ್ಧಿಗೆ ಅವಶ್ಯಕವಾಗಿರುವುದನ್ನು ಮಾಡಬೇಕು, ಈ ವರ್ಷ ಜಿಲ್ಲೆಗೆ ಹೇಮಾವತಿ ನೀರು 19 ಟಿಎಂಸಿ ಹರಿದುಬಂದಿದೆ, ಜಿಲ್ಲೆಯ ಪಾಲಿನ ಪೂರ್ಣ ನೀರನ್ನು ಹರಿಸಬೇಕು, ಅಲ್ಲಿಯವರೆಗೆ ನೀರು ನಿಲ್ಲಿಸಬಾರದು ಎಂದು ಕೆ.ಎನ್.ರಾಜಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಬೇಕು, 206 ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರವಾಗಿ ನಡೆಯಲಿ. ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರಿನ ಹಂಚಿಕೆ ಮಾಡಲಾಗಿದೆ, 58 ಕೋಟಿ ವೆಚ್ಚ ಮಾಡಿ ಚಾನೆಲ್ ಮಾಡಿರುವುದು ಏಕೆ? ಕುಡಿಯುವ ನೀರಿಗಾಗಿ ಈ ಯೋಜನೆ ಮಾಡಲಾಗಿದೆ, ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಮಾಡಿದ್ದಾರೆ ಅದನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಆಂಧ್ರದಲ್ಲಿ ಪೂರ್ಣಗೊಂಡಿದೆ, ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಿ ರೈಲ್ವೆ ಇಲಾಖೆಗೆ ನೀಡಿಲ್ಲ ಹೀಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದ ಅವರು, ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ ಈ ನಾಲ್ಕು ತಾಲ್ಲೂಕುಗಳು ಒಳಗೊಂಡ ಮಧುಗಿರಿ ಜಿಲ್ಲೆಯನ್ನು ಮಾಡಬೇಕಿದೆ, ಮಧುಗಿರಿಯ ಏಕಶಿಲ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎಸ್.ಷಫಿಅಹಮದ್ ಮಾತನಾಡಿ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದವರು. ಜಾತ್ಯಾತೀತ ಪಕ್ಷದವರು. ಇವರು ಪರಸ್ಪರ ನಿಂದನೆ ಮಾಡುವುದು ಸರಿಯಲ್ಲ. ಇಬ್ಬರೂ ರಾಜ್ಯದ ಅಭಿವೃದ್ಧಿ ಬಗೆ ಚರ್ಚೆ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಕಲ್ಲಳ್ಳಿ ದೇವರಾಜು, ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ರಾಜಗೋಪಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ