ಶಿವಮೊಗ್ಗ:
ಎಚ್ 1 ಎನ್ 1 ಮಹಾಮಾರಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಇದರಿಂದ ರಾಜ್ಯದ ಜನತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅವಶ್ಯಕತೆ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾದ್ಯಂತ ಹಂದಿ ಜ್ವರ ವ್ಯಾಪಕವಾಗಿ ಹರಡುತ್ತಿದೆ ಎನ್ನಲಾಗಿದ್ದು, ಇದೂವರೆಗೂ 14 ಜನರಲ್ಲಿ ಈ ಜ್ವರ ಕಾಣಿಸಿಕೊಂಡಿದ್ದು ತಾಲೂಕು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ, ಮೇಲಿನಕುರುವಳ್ಳಿ, ಮಹಿಷಿ, ದಬ್ಬಣಗದ್ದೆ ಮೇಗರವಳ್ಳಿ ಇನ್ನಿತರ ಪ್ರದೇಶಗಳಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ತಾಲೂಕು ಆಸ್ಪತ್ರೆಗೆ ನಿತ್ಯ 20-30 ಜನ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರಂತೆ. ಇನ್ನು ಇದೇ ವೇಳೆ ಆಸ್ಪತ್ರೆಯಲ್ಲಿ ವಿಶೇಷ ಘಟಕವನ್ನು ತೆರೆಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಮಣಿಪಾಲ ಹಾಗೂ ಶಿವಮೊಗ್ಗದ ಪ್ರಯೋಗಾಲಯಗಳಿಗೆ ಕಳಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜ್ವರ ಪೀಡಿತರು ಉಡುಪಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಆಗುತ್ತಿದ್ದಾರೆ.
ಎಚ್1 ಎನ್1 ಲಕ್ಷಣಗಳು:
- ಸತತ ಕೆಮ್ಮು, ಅತೀವ ಜ್ವರ, ಕಫಗಟ್ಟಿರುವ ಗಂಟಲು, ಇಡಿಯ ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು ಮತ್ತು ವಾಂತಿ ಮತ್ತು ಬೇಧಿ.
- ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ರೋಗ ಸಂಭವವಿರುತ್ತದೆ.
- ರೋಗಾಣು ಬೆರೆತ ನೀರು, ಮಾಂಸ, ಸೇವಿಸುವುದರಿಂದ ರೋಗ ಹರಡಬಹುದು.
- ಇದೊಂದು ಸಾಂಕ್ರಾಮಿಕ ಕಾಯಿಲೆ
- ಹಂದಿಜ್ವರ ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ ಆಹಾರ ವಸ್ತುಗಳಿಗೆ ಸೇರಿದರೆ ಸೊಂಕು ತಗಲುವ ಸಾಧ್ಯತೆಯಿದೆ.
- ಮೂಗಿಗೆ ಸದಾ ಬಟ್ಟೆ ಕಟ್ಟಿಕೊಳ್ಳುವುದರಿಂದ ಕೆಲ ಪ್ರಮಾಣದಲ್ಲಿ ರೋಗ ಹರಡುವುದನ್ನು ತಡೆಯಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ