ವಿಧಾನ ಪರಿಷತ್ ನಲ್ಲಿ ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ!!

ಬೆಂಗಳೂರು : 

      ಸಭಾಪತಿ ಚುನಾವಣೆಗೆ ಸಂಬಂಧಪಟ್ಟಂತೆ ಇಂದು ವಿಧಾನಪರಿಷತ್ತಿನಲ್ಲಿ ಆಡಳಿತ ಡಪಕ್ಷವಾದ ಬಿಜೆಪಿ, ಪ್ರತಿಪಕ್ಷವಾದ ಕಾಂಗ್ರೆಸ್ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದಲ್ಲದೇ ಇತಿಹಾಸದಲ್ಲೇ ಕಂಡರಿಯದ ಕಚ್ಚಾಟದೊಂದಿಗೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು.

      ಕಲಾಪ ಆರಂಭಕ್ಕೂ ಮುನ್ನ ಜೆಡಿಎಸ್ ಉಪಸಭಾಪತಿ ಧರ್ಮೇಗೌಡ ಅವರು ಸಭಾಪತಿ ಪೀಠದ ಮೇಲೆ ಕುಳಿತುಕೊಂಡಿದ್ದರು. ಇದನ್ನು ಕಾಂಗ್ರೆಸ್‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು.

      ಪೀಠದ ಹಿಂದೆ ಇರುವ ಬಾಗಿಲ ಮೂಲಕ ಸಭಾಪತಿ ಅವರು ಒಳಬರದಂತೆ ಬಿಜೆಪಿ ಸದಸ್ಯರು ಬಾಗಿಲನ್ನು ಬಂದ್ ಮಾಡಿದರು. ಮಾರ್ಷಲ್ ಅವರು ಬಾಗಿಲು ತೆಗೆಯಲು ಪ್ರಯತ್ನಿಸಿದರು. ಆದರೆ ಅದಕ್ಕೆ ಬಿಜೆಪಿ ಸದಸ್ಯರು ಅವಕಾಶ ನೀಡದೆ ಅಡ್ಡಿಪಡಿಸಿದರು. ಕಾಂಗ್ರೆಸ್‍ನ ನಜೀರ್ ಅಹಮ್ಮದ್ ಮತ್ತಿತರರು ಬಾಗಿಲು ತೆಗೆಸುವ ಪ್ರಯತ್ನ ಮಾಡಿದರೂ ಅದು ಫಲ ನೀಡಲಿಲ್ಲ. ಹೀಗಾಗಿ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಒಳಬರಲು ಸಾಧ್ಯವಾಗಲಿಲ್ಲ.

     ಆ ವೇಳೆ ಸಭಾಪತಿ ಅವರ ಪೀಠದ ಬಳಿ ಕಾಂಗ್ರೆಸ್ ಸದಸ್ಯರು ಧಾವಿಸಿ ಉಪಸಭಾಪತಿ ಧರ್ಮೇಗೌಡ ಅವರನ್ನು ಬಲವಂತವಾಗಿ ಎಳೆದು ಕೆಳಗೆ ತಳ್ಳಿದರು. ಆ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾರಾಮಾರಿ ನಡೆದು ಮಾರ್ಷಲ್‍ಗಳು ಒಳಬಂದು ರಕ್ಷಣೆ ಮಾಡಬೇಕಾಯಿತು.

    ಸಭಾಪತಿ ಪೀಠದಿಂದ ಧರ್ಮೇಗೌಡ ಅವರನ್ನು ಹೊರದಬ್ಬಲು ಕಾಂಗ್ರೆಸಿಗರು ಪ್ರಯತ್ನ ಪಡುತ್ತಿದ್ದರೆ, ಅದನ್ನು ತಡೆಯಲು ಬಿಜೆಪಿ ಸದಸ್ಯರು ಹರಸಾಹಸಪಟ್ಟರು. ಈ ಬಲಪ್ರಯೋಗದಲ್ಲಿ ವಿಧಾನ ಪರಿಷತ್ ಇತಿಹಾಸವೇ ನಾಚುವಂತಹ ಘಟನೆಗಳು ನಡೆದುಹೋದವು. ಧರ್ಮೇಗೌಡ ಅವರನ್ನು ಎಳೆದು ಹಾಕಿದ ಬಳಿಕ ಮತ್ತೊಬ್ಬ ಕಾಂಗ್ರೆಸ್ ಸದಸ್ಯರು ಕುಳಿತುಕೊಳ್ಳಲು ಹೋದರು. ಅವರನ್ನು ಕಾಂಗ್ರೆಸ್‍ನ ನಾರಾಯಣಸ್ವಾಮಿ ಕೆಳಗೆ ತಳ್ಳಿ ತಾವು ಕುಳಿತುಕೊಳ್ಳಲು ಹೋದರು. ಬಿಜೆಪಿ ಸದಸ್ಯರು ಅವರನ್ನೂ ಬಲವಂತವಾಗಿ ಕೆಳಗೆ ಎಳೆದು ಹಾಕಿದರು.

     ಎಳೆದಾಟ, ನೂಕಾಟ, ಪರಸ್ಪರ ಕೈ ಮಿಲಾಯಿಸುವಂತಹ ಘಟನೆಗಳು ಎಥೇಚ್ಛವಾಗಿ ನಡೆದವು. ಇಡೀ ಸದನವೇ ರಣಾಂಗಣವಾಗಿ ಮಾರ್ಪಟ್ಟಿತು. ಮಾರ್ಷಲ್‍ಗಳು ಕೂಡ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ನಿಂತು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಗಲಾಟೆ, ಗದ್ದಲ, ಕೋಲಾಹಲದ ನಡುವೆ ಯಾರು ಸದನವನ್ನು ನಿಯಂತ್ರಿಸಬೇಕು, ಯಾರು ಕಲಾಪದ ಅಧ್ಯಕ್ಷತೆ ವಹಿಸಬೇಕು ಎಂಬುದೇ ಸ್ಪಷ್ಟವಾಗದೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

     ಆರಂಭದಲ್ಲಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಸಭಾಪತಿ ಪೀಠದ ಬಳಿ ಆಜುಬಾಜಿನಲ್ಲಿ ನಿಂತಿದ್ದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಿ ಕೆಳಗೆ ಕಳುಹಿಸುವ ಪ್ರಯತ್ನ ಮಾಡಿದರು.

     ಆದರೆ, ಅದು ಸಾಧ್ಯವಾಗಲಿಲ್ಲ. ನಂತರ ಗದ್ದಲ ಜೋರಾಯಿತು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಸೇರಿದಂತೆ ಹಲವಾರು ಮಂದಿ ಏನೇ ಸರ್ಕಸ್ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುವ ಸಲುವಾಗಿ ಸಭಾಪತಿ ಪೀಠದ ಮುಂದೆ ಹಾಕಲಾಗಿದ್ದ ಪಾರದರ್ಶಕ ಫೈಬರ್ ಗ್ಲಾಸ್‍ಅನ್ನೂ ಕೂಡ ಸದಸ್ಯರು ಕಿತ್ತೊಗೆದರು. ಪರಸ್ಪರ ಮಾತಿನ ಚಕಮಕಿ, ತಳ್ಳಾಟ, ನೂಕಾಟ, ಬಲ ಪ್ರಯೋಗಗಳು ಕಲಾಪವನ್ನು ಅಸ್ತವ್ಯಸ್ತಗೊಳಿಸಿದ್ದಲ್ಲದೆ ಪ್ರಜಾಪ್ರಭುತ್ವ ತಲೆ ತಗ್ಗಿಸುವಂತೆ ಮಾಡಿತ್ತು.

      ಬಿಜೆಪಿ ಹಾಲಿ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಪಕ್ಷಪಾತಿಯಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ನ.25ರಂದು ಅವಿಶ್ವಾಸ ನಿರ್ಣಯದ ಸೂಚನೆ ನೀಡಿತ್ತು. ಡಿ.7 ರಿಂದ 10ರ ವರೆಗೆ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬಿಜೆಪಿ ಪ್ರಯತ್ನಿಸಿತ್ತಾದರೂ ನೋಟಿಸ್ ನೀಡಿ 14 ದಿನ ಕಳೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ಅಡ್ಡಿಪಡಿಸಿತ್ತು.
ಬಿಜೆಪಿಯ 11 ಮಂದಿ ಸದಸ್ಯರು ನೀಡಿರುವ ನೋಟಿಸ್‍ನಲ್ಲಿ ಕೆಲವು ಗೊಂದಲಗಳಿವೆ. ಅದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ರೂಲಿಂಗ್ ನೀಡುವುದಾಗಿ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಹೇಳಿದ್ದರು.

     ಅದರಂತೆ ಅಧಿವೇಶನ ಕೊನೆಗೊಂಡ ಬಳಿಕ ತೀರ್ಮಾನ ಹೇಳಿದ ಪ್ರತಾಪ್‍ಚಂದ್ರಶೆಟ್ಟಿ ಅವರು ನಿಲುವಳಿ ಸೂಚನೆ ತಿರಸ್ಕರಿಸಿರುವುದಾಗಿ ಬಿಜೆಪಿ ಸದಸ್ಯರಿಗೆ ಹಿಂಬರಹ ನೀಡಿದ್ದರು. ಆದರೆ, ಇದನ್ನು ಒಪ್ಪದ ಬಿಜೆಪಿ ನಿನ್ನೆ ಪತ್ರಚಳವಳಿ ನಡೆಸಿತ್ತು. ಬಿಜೆಪಿಯ ಎಲ್ಲ ಸದಸ್ಯರೂ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರಿಗೆ ಪತ್ರ ಬರೆದು ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಸೂಚನೆ ನೀಡಿರುವುದರಿಂದ ಸಭಾಪತಿ ಸ್ಥಾನದಲ್ಲಿ ನೀವು ಕೂರಬಾರದು ಎಂದು ಒತ್ತಾಯಿಸಿದ್ದಲ್ಲದೆ ನಾವು ನೀಡಿರುವ ನಿಲುವಳಿ ಸೂಚನೆಯನ್ನು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿತ್ತು.

     ಆದರೆ, ಇಂದು ಬೆಳಗ್ಗೆ ಸಭಾಪತಿ ಪೀಠದಲ್ಲಿ ಪ್ರತಾಪ್‍ಚಂದ್ರಶೆಟ್ಟಿ ಅವರನ್ನು ಕೂರಲು ಬಿಡದೆ ಬಿಜೆಪಿ ಸದಸ್ಯರು ಗದ್ದಲ ಮಾಡಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ವಿಧಾನ ಪರಿಷತ್ ಅಲ್ಲೋಲ-ಕಲ್ಲೋಲವಾಯಿತು.

     ಜೆಡಿಎಸ್ ಸಭಾಪತಿ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಜತೆ ಕೈ ಜೋಡಿಸಿದ್ದರಿಂದ ಗದ್ದಲದಲ್ಲಿ ಕೆಲ ಸದಸ್ಯರು ಸರ್ಕಾರಕ್ಕೆ ಬೆಂಬಲ ನೀಡಿದರು. ಸಭಾಪತಿ ಪೀಠದಲ್ಲಿ ಕುಳಿತಿದ್ದವರು ಕೂಡ ಏನೂ ಮಾಡಲಾಗದಂತಹ ಅಸಹಾಯಕ ಸ್ಥಿತಿಯಲ್ಲಿ ಅರ್ಧ ಗಂಟೆ ಅಸ್ತವ್ಯಸ್ತ ಕಲಾಪ ನಡೆದಿತ್ತು. ನಂತರ ಪೀಠದಲ್ಲಿ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಪಾಟೀಲ್ ಕುಳಿತಿದ್ದರು. ಅದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸಭಾಪತಿ ಅವರ ಪ್ಯಾನಲ್‍ನಲ್ಲಿ ಇಲ್ಲದ ಸದಸ್ಯರು ಪೀಠದಲ್ಲಿ ಕೂರಲು ಅವಕಾಶವಿಲ್ಲ. ದಯವಿಟ್ಟು ಪೀಠ ತೆರವುಗೊಳಿಸಿ ಎಂದು ತೇಜಸ್ವಿನಿ ಗೌಡ ಸೇರಿದಂತೆ ಹಲವಾರು ಬಿಜೆಪಿ ಸದಸ್ಯರು ಆಗ್ರಹಿಸಿದರು.

      ಈ ನಡುವೆ ಒಳಗೆ ಬಂದ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಘೋಷಿಸಿ ಹೊರಟುಹೋದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap