ತುಮಕೂರು :
ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ವರಿಷ್ಠ, ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದ ದೋಸ್ತಿ ಅಭ್ಯರ್ಥಿಯಾಗಿ ಈಗಾಗಲೇ ಹೆಚ್.ಡಿ. ದೇವೇಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಬಂಡಾಯವೆದ್ದ ಹಿನ್ನೆಲೆಯಲ್ಲಿ ರಾಜ್ಯ ಕೈ ನಾಯಕರ ವಿರುದ್ಧ ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುದ್ದಹನುಮೇಗೌಡರು ಅಭಿಮಾನಿಗಳ ಒತ್ತಾಯದ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನವನ್ನು ಕೂಡಲೇ ಸರಿಪಡಿಸದಿದ್ದರೆ, ಪರಿಸ್ಥಿತಿ ಸರಿಯಿರಲ್ಲ ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದ್ದಾರೆ.
ಮತ್ತೊಂದು ಕಡೆ ಕೆ.ಎನ್.ರಾಜಣ್ಣ ಮೈತ್ರಿ ಧರ್ಮ ಮರೆತು ತನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಯಾವ ನಾಯಕರೂ ಗಮನ ಹರಿಸುತ್ತಿಲ್ಲ. ಆರಂಭದಲ್ಲೇ ಸಮಸ್ಯೆ ಬಗೆಹರಿಸಿದರೆ ಒಳ್ಳೆಯದು, ಇಲ್ಲದೇ ಇದ್ದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಅಲ್ಲದೇ ಮಂಡ್ಯದಲ್ಲೂ ಸ್ಥಳೀಯ ಕೈ ಮುಖಂಡರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ದೂರವಾಣಿ ಕರೆ ಮಾಡಿ ಹೆಚ್.ಡಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
