ಬೆಂಗಳೂರು:

ನಾನು ಅಧಿಕಾರದಿಂದ ನಿರ್ಗಮಿಸುವ ಮುನ್ನ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ನಿರ್ಗಮಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಾವು ಅಧಿಕಾರದಿಂದ ಇಳಿಯುವ ಮುನ್ನ ರೈತರು ಮತ್ತು ಬಡವರನ್ನು ಸಾಲಮುಕ್ತ ಗೊಳಿಸಲು ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಿದರು. ಈ ಮೂಲಕ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಸೋಲುಂಡು ಅಧಿಕಾರ ಕಳೆದುಕೊಂಡಿರುವ ಹಂಗಾಮಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರೈತರಿಗೆ ಮತ್ತು ಬಡವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಕರ್ನಾಟಕ ಋಣ ಪರಿಹಾರ ಕಾಯ್ದೆಯನ್ನು (ಡೆಬ್ಟ್ ರಿಲೀಫ್ ಆಕ್ಟ್) ಮೈತ್ರಿ ಸರ್ಕಾರ ಜಿಒ (ಸರ್ಕಾರಿ ಆದೇಶ) ಹೊರಡಿಸಿದೆ. ಜುಲೈ 16 ರಂದು ರಾಷ್ಟ್ರಪತಿ ಈ ಕಾಯ್ದೆಗೆ ಅಂಕಿತ ಹಾಕಿದ್ದಾರೆ. ಇದಕ್ಕೆ ನಾವು ರಾಷ್ಟ್ರಪತಿಯವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಈ ಕಾಯ್ದೆಯ ಅನ್ವಯ ಜುಲೈ 23 ಕ್ಕೂ ಮೊದಲು ವಾರ್ಷಿಕ ಆದಾಯ 1 ಲಕ್ಷದ 20 ಸಾವಿರಕ್ಕಿಂತ ಕಡಿಮೆ ಇರುವವರು ನೋಡಲ್ ಅಧಿಕಾರಿಗಳನ್ನು ಭೇಟಿಯಾಗಿ ಸೂಕ್ತ ದಾಖಲೆಗಳನ್ನು 90 ದಿನಗಳ ಒಳಗೆ ಸಲ್ಲಿಸಬೇಕು. , ಭೂರಹಿತರು ಮತ್ತು 2 ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವವರು ಲೇವಾದೇವಿದಾರರ ಬಳಿ ಪಡೆದಿರುವ ಸಾಲ ಒಂದು ಬಾರಿ ಮನ್ನಾ ಆಗಲಿದೆ. ಈ ಕಾಯ್ದೆ ಒಂದು ವರ್ಷದವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.
ನಾನು ಅಧಿಕಾರಕ್ಕೆ ಬಂದಾಗ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡುವುದಾಗಿ ಮಾತು ನೀಡಿದ್ದೆ. ಆ ಮಾತನ್ನು ನಾನು ಉಳಿಸಿಕೊಂಡಿದ್ದೇನೆ. ಒಂದು ಉತ್ತಮ ಕಾಯ್ದೆಯನ್ನು ಜಾರಿಗೆ ತಂದ ಸಂತೃಪ್ತಿ ನನಗಿದೆ ಎಂದು ಎಚ್ಡಿಕೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








