ಹೊಸದುರ್ಗ:

ಸುಮಾರು 226 ಗ್ರಾಮಗಳ ವ್ಯಾಪ್ತಿಗೆ ಬರುವ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಸುಮಾರು 16 ವರ್ಷದ ಹಿಂದೆ ನಿರ್ಮಿಸಿದ್ದು, ಪ್ರತಿ ನಿತ್ಯ ಸಾವಿರಾರು ಹೊರ ರೋಗಿಗಳು ಚಿಕೆತ್ಸೆಗೆ ಬರುತ್ತಿದ್ದು, ಈಗಿನ ಜನಸಂಖ್ಯೆಗೆ ಅನುಗುಣವಾಗಿ ಹೋಲಿಸಿದರೆ ಸಾರ್ವಜನಿಕ ಆಸ್ಪತ್ರೆ ಚಿಕ್ಕದಾಗಿದ್ದು ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಬೇಕಾಗಿದೆ.
ವಿವಿಧ ಕಾರ್ಯಕ್ರಮಗಳು, ವಿವಿಧ ಸೌಲಭ್ಯಗಳು, ಹೊಸ ಹೊಸ ತಜ್ಞ ವೈದ್ಯರು ಬರುತ್ತಿದ್ದು ಈಗಿರುವ ಕಟ್ಟಡ ಯಾವುದಕ್ಕೂ ಸಾಲುತ್ತಿಲ್ಲ. ಅದರಲ್ಲಿ ತುರ್ತು ಚಿಕಿತ್ಸಾ ಘಟಕ ತೀರ ಚಿಕ್ಕದಾಗಿದ್ದು ಒಮ್ಮೆಲೆ ಬಹಳಷ್ಟು ಅಪಘಾತಗಳು ಸಂಭವಿಸಿ ಅಥವಾ ವಾಂತಿಭೇದಿ ಮುಂತಾದ ಪ್ರಕರಣಗಳು ಒಟ್ಟಾಗಿ ಬಂದಾಗ ಅವರಿಗೆ ಚಿಕೆತ್ಸೆ ನೀಡಲು ಜಾಗದ ಕೊರತೆ ಎದ್ದು ಕಾಣುತ್ತಿದೆ.
ಈ ರೀತಿ ಇದ್ದರೂ ತಾಲ್ಲೂಕಿನ ಶಾಸಕರು, ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು ಹಾಗೂ ಅತೀ ಮುಖ್ಯವಾಗಿ ಸಾರ್ವಜನಿಕರು ಈ ಬಗ್ಗೆ ಯಾರೂ ಕೂಡ ಧ್ವನಿ ಎತ್ತುತ್ತಿಲ್ಲ. ಅದಕ್ಕಾಗಿ ಸಂಬಂಧ ಪಟ್ಟವರು ಹೆಚ್ಚು ಒತ್ತು ಕೊಡಬೇಕಾಗಿದೆ
ತಾಯಿ, ಮಕ್ಕಳ ಆರೈಕೆಗೆ ಪ್ರತ್ಯೇಕ ಆಸ್ಪತ್ರೆ ಇಲ್ಲ :
ತಾಯಿ ಹಾಗೂ ಮಕ್ಕಳ ಆರೈಕೆ ಮಾಡುವುದಕ್ಕೆ ಪ್ರತ್ಯೇಕ ಆಸ್ಪತ್ರೆಯಿಲ್ಲ. ಆಸ್ಪತ್ರೆಯನ್ನು ಪ್ರತ್ಯೇಕ ಮಾಡುವುದಕ್ಕೆ ಬೇಡಿಕೆ ಹೆಚ್ಚಿದೆ. ಆಸ್ಪತ್ರೆಗೆ ಬೇಕಾಗುವ ವೈದ್ಯರು, ಸಿಬ್ಬಂದಿ ಹಾಗೂ ಇತರೆ ಸೌಕರ್ಯಕ್ಕಾಗಿ ಜಿಲ್ಲಾಢಳಿತ ಕ್ರಮ ಕೈಗೊಳ್ಳಬೇಕಾಗುತ್ತದೆ.
ಪ್ರತಿ ತಿಂಗಳು 60 ರಿಂದ 70 ಹೆರಿಗೆಗಳು ಆಗುತ್ತಿದ್ದು, ಹಾಸಿಗೆಗಳ ಕೊರತೆ ಜಾಸ್ತಿ ಇದ್ದು, ಹೆರಿಗೆ ಆದವರನ್ನು 2 ದಿನಗಟ್ಟಲೇ ಇಟ್ಟುಕೊಳ್ಳಬೇಕು. ಅದರಲ್ಲಿ ಪ್ರತಿಶತ 15 ರಷ್ಟು ಸಿಜೇರಿಯನ್ ಶಸ್ತ್ರ ಚಿಕೆತ್ಸೆ ಆಗಿರುತ್ತವೆ. ಪ್ರಸ್ತುತ ಒಬ್ಬರೇ ಸ್ತ್ರೀ ರೋಗ ತಜ್ಞರಿದ್ದು ಹಾಗೂ ಒಬ್ಬರೇ ಅರವಳಿಕೆ ತಜ್ಞರಿದ್ದು, ಇನ್ನು ಸ್ರೀರೋಗ ತಜ್ಞರು ಮತ್ತು ಅರವಳಿಕೆ ತಜ್ಞರು ಬರಲಿದ್ದು ತಿಂಗಳ ಎಲ್ಲಾ ದಿನಗಳಲ್ಲಿ 24 ಗಂಟೆಗಳಲ್ಲಿಯೂ ಅವರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಬ್ಬರಿಗೂ ಸಹ ತುರ್ತು ಚಿಕೆತ್ಸೆ ಕರ್ತವ್ಯಗಳು ಸರದಿ ಮೇಲೆ ಇರುತ್ತದೆ. ಅವರ ಅನುಪಸ್ಥಿತಿ, ವಿಶ್ರಾಂತಿ ಅವಧಿ ಅಥವಾ ಕ್ಲಿಷ್ಟಕರ ಹೆರಿಗೆಗಳು ಇದ್ದರೆ ಅನಿವಾರ್ಯವಾಗಿ ಮಹಿಳೆಯರನ್ನು ದಾವಣಗೆರೆ, ಚಿತ್ತದುರ್ಗ, ಶಿವಮೊಗ್ಗಕ್ಕೆ ಆಸ್ಪತ್ರೆಗಳಿಗೆ ಕಳಿಸಿ ಕೊಡಬೇಕಾಗುತ್ತದೆ. ಈಗಾಗಲೇ ಚಳ್ಳಕೆರೆಯಲ್ಲಿದ್ದು, ಹೊಳಲ್ಕೆರೆ, ಹಿರಿಯೂರಿನಲ್ಲಿ ಕಾಮಗಾರಿ ನಡೆಯುತ್ತಿದ್ದು, ಹೊಸದುರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದರೆ ಬೇರೆ ಕಡೆ ಕಳುಹಿಸುವ ಬದಲು ಕ್ಲಿಷ್ಟಕರ ಹೆರಿಗೆಗಳನ್ನು 24 ಗಂಟೆ ಇಲ್ಲಿಯೇ ನಿರ್ವಹಿಸಬಹುದು ಎಂದು ಹೇಳುತ್ತಾರೆ ಡಾ.ಸುಧಾ.
ಜಿ.ಪಂ ನಿಂದ ಬರುವ ಅನುದಾನ ವಿಳಂಬ :
ಜಿಲ್ಲಾ ಪಂಚಾಯಿತಿಯಿಂದ ಹೊಸದುರ್ಗ ತಾಲ್ಲೂಕು ಆರೋಗ್ಯ ಇಲಾಖೆಗೆ ಬಿಡುಗಡೆಯಾಗುವ ಅನುದಾನ ತುಂಬಾ ವಿಳಂಬವಾಗುತ್ತಿದೆ. ಹಾಗಾಗಿ ಜಿಲ್ಲಾ ಪಂಚಾಯಿತಿಯಿಂದ ರಾಜ್ಯ ವಲಯಕ್ಕೆ ಶಿಪಾರಸ್ತು ಮಾಡಿದರೆ ತುಂಬಾ ಬೇಗನೇ ಅನುದಾನ ಕೈಗೆ ಸಿಗುತ್ತದೆ ಎಂಬ ಮಾತುಗಳು ಬರುವುದುಂಟು. ಕೆಲವೊಮ್ಮೆ ಮೆಡಿಸಿನ್‍ಗಳು ಮತ್ತು ರೋಗಿಗಳಿಗೆ ಸಂಬಂಧಿಸಿದಂತೆ ಕೆಲವು ವಸ್ತುಗಳು ಸಾಕಗದೇ ಹೊರಗಡೆಯಿಂದ ತರಿಸಿ ರೋಗಿಗಳಿಗೆ ಕೊಡುತ್ತಿದ್ದಾರೆ. ಬರುವಂತಹ ಹೆಚ್ಚಿನ ಅನುದಾನದಲ್ಲಿ ಮೆಂಟೆನ್ಡ್ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ವೈಧ್ಯರ ಅವಶ್ಯಕತೆ ಇದೆ:
ತುರ್ತು ಚಿಕಿತ್ಸಾ ವಿಭಾಗಕ್ಕೆ ಪ್ರತ್ಯೇಕವಾಗಿ ಎಂ.ಬಿ.ಬಿ.ಎಸ್ 3 ವೈಧ್ಯರು ಬೇಕಾಗಿದ್ದು, ಫಿಜೆಸಿಯನ್, ಕಣ್ಣಿನ ತಜ್ಞರು, ಮಕ್ಕಳ ತಜ್ಞರು ಹಾಗೂ ಮುಖ್ಯ ವೈಧ್ಯಾಧಿಕಾರಿ ಅವಶ್ಯಕತೆ ಜಾಸ್ತಿ ಇರುತ್ತದೆ.
ಜನರಿಕ್ ಮೆಡಿಸಿನ್ ಯೋಜನೆ ಜನಗಳಿಗೆ ತಲುಪುತ್ತಿಲ್ಲ:
ಬಡ ರೋಗಿಗಳಿಗೆ ಉಪಯುಕ್ತವಾಗುವ ಜನರಿಕ್ ಮೆಡಿಸಿನ್ ಮಳಿಗೆ ಆಸ್ಪತ್ರೆ ಒಳಗಿಡುವ ಬದಲು ಆಸ್ಪತ್ರೆ ಹಿಂಭಾಗದಲ್ಲಿ ಆರಂಭಿಸಿದ್ದು ಸಾರ್ವಜನಿಕರು ಈ ಮಳಿಗೆಯನ್ನು ಹುಡುಕಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಔಷಧಗಳ ಕೊರತೆ ಸಾಕಷ್ಟು ಇದ್ದು, ಅನೇಕ ಔಷಧಿಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ. ಹೊರಗಡೆ ಇರುವುದರಿಂದ ಹೆಚ್ಚಾಗಿ ಸಾರ್ವಜನಿಕರಿಗೆ ಈ ಭಾಗ್ಯ ದೊರಕುತ್ತಿಲ್ಲ ಎಂದು ಹೇಳುತ್ತಾರೆ ಸಮಾಜ ಸೇವಕಿ ಮಾನಸ ಬಸವರಾಜು.
ನೀರಿನ ಕೊರತೆ ಹೆಚ್ಚಾಗಿದೆ :
ಡಯಾಲಿಸಿಸ್ ವಿಭಾಗದಲ್ಲಿ ನೀರಿನ ಸೌಲಭ್ಯ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪ್ರತಿ ಡಯಾಲಿಸಿಸ್‍ಗೆ ದುಸ್ಸಾಹ ಪಟ್ಟು ಚಿಕೆತ್ಸೆ ಪಡೆಯುವಂತಾಗಿದೆ. ನೀರಿನ ಸಮಸ್ಯೆ ಹೆಚ್ಚಿದೆ ಎಂದು ಮನವಿ ಸಲ್ಲಿಸಿದರೂ ನಿರ್ಲಕ್ಷಿಸಲಾಗುತ್ತಿದೆ ಎಂಬುದು ಡಯಾಲಿಸಿಸ್ ರೋಗಿಗಳ ಅಂಬೋಣವಾಗಿದೆ. ಹಿಂದೊಮ್ಮೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಎರಡು ಬೋರ್ 700 ಅಡಿ ಆಳ ಕೊರೆಸಿದ್ದು ನೀರು ಸಹ ಬಿದ್ದಿಲ್ಲ. ಈಗ ಆಸ್ಪತ್ರೆ ಸಿಬ್ಬಂದಿಯವರು ಹೊರಗಡೆ 500 ರಿಂದ 600 ರೂ ಕೊಟ್ಟು ರೋಗಿಗಳಿಗೆ ನೀರನ್ನು ಪೂರೈಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದವು.
ಒಟ್ಟಾರೆ ಈ ಬಗ್ಗೆ ಜಿಲ್ಲಾಢಳಿತ ಹಾಗೂ ತಾಲ್ಲೂಕು ಆಡಳಿತ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಬಹುದು ಎಂದು ಕಾದು ನೋಡಬೇಕಾಗಿದೆ.
ಈಗಾಗಲೇ ಈ ಬಗ್ಗೆ ಎರಡುವರೆ ತಿಂಗಳಿಂದ ಎರಡರಿಂದ ಮೂರು ಬಾರಿ ತುರ್ತು ಚಿಕಿತ್ಸಾ ವಿಭಾಗಕ್ಕೆ ಕಟ್ಟಡ ನಿರ್ಮಿಸಲು ಈಗಾಗಲೇ ಬಿಲ್ಡಿಂಗ್ ಪ್ಲಾನ್ ಮಾಡಲು ತಾಲ್ಲೂಕು ವೈಧ್ಯಾಧಿಕಾರಿ ನಡುವೆ ಚರ್ಚೆ ಮಾಡಿದ್ದೇನೆ. ತಾಂತ್ರಿಕ ದೋಷದಿಂದ ಕಾರ್ಯ ವಿಳಂಬವಾಗಿದೆ. ಪ್ರತ್ಯೇಕ 4 ಕೌಂಟರ್ ಓಪನ್ ಮಾಡಿಸಿ ಕೌಂಟರ್‍ಗೊಂದು ಡಾಕ್ಟ್‍ರ್‍ಗಳನ್ನು ನೇಮಕ ಮಾಡಲು ತೀರ್ಮಾನಿಸಿದ್ದೇವೆ. ಒಂದು ವಾರದೊಳಗೆ ಇಬ್ಬರೂ ಡಾಕ್ಟರ್ ಬರಲಿದ್ದು ಈ ಸಮಸ್ಯೆ ಅತೀ ಶೀಘ್ರದಲ್ಲಿ ಬಗೆ ಹರಿಸುತ್ತೇನೆ.
– ಡಾ.ಕೆ.ಅನಂತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸದುರ್ಗ
ದಶಕಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈಧ್ಯರ ಕೊರತೆಯಿದ್ದು, ಜನ ಸಾಮಾನ್ಯರು ಹೆಚ್ಚಿನ ಚಿಕೆತ್ಸೆ ಪಡೆಯಲು ಪ್ರತಿನಿತ್ಯ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಸ್ಪತ್ರೆಗೆ ಅಂಬ್ಯೂಲೆನ್ಸ್‍ಗಳು ಕಡಿಮೆಯಿದ್ದು ಕಂಡಿಷನ್ ಇರುವಂತಹ ಇನ್ನು ಹೆಚ್ಚು ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಬೇಕು.
– ಮಾಚೇನಹಳ್ಳಿ ರಾಮಕೃಷ್ಣ ಹಿರಿಯ ಪತ್ರಕರ್ತ ಹೊಸದುರ್ಗ
ನಮ್ಮ ಜಿಲ್ಲೆಗೆ ಚಿತ್ತದುರ್ಗ ಬಿಟ್ಟರೆ ಚಳ್ಳಕೆರೆ ಆಸ್ಪತ್ರೆಯಲ್ಲಿ ಮಾತ್ರ ತಾಯಿ ಮತ್ತು ಮಕ್ಕಳ ಪ್ರತ್ಯೇಕ ಆಸ್ಪತ್ರೆ ಇದೆ. ಆದರೆ ಇಲ್ಲಿ ಯಾಕಾಗಿಲ್ಲವೆಂಬುದು ನಮ್ಮ ತಾಲ್ಲೂಕಿನ ದುರಂತ. ಕ್ಲಿಷ್ಠಕರ ಹೆರಿಗೆಗಳು ಬಂದರೆ ಜಿಲ್ಲಾ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ 70 ರಿಂದ 80 ಕಿಮೀ ರವಾನಿಸಬೇಕಾಗುವ ಅನಿವಾರ್ಯತೆ ಹೆಚ್ಚುತ್ತಿದೆ. ಶಾಸಕರು ಮತ್ತು ಅಧ್ಯಕ್ಷರು ಮನಸ್ಸು ಮಾಡಿ ಆಸ್ಪತ್ರೆ ಹಳೆ ಕಟ್ಟಡ ಜಾಗದಲ್ಲಿ ತಾತ್ಕಾಲಿಕವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರತ್ಯೇಕ ಮಾಡಿಸಬಹುದು.
–ಎಂ.ಆರ್.ಸಿ.ಮೂರ್ತಿ ಹಿರಿಯ ನಿವೃತ್ತ ಪಾರ್ಮಸಿಸ್ಟ್ ಹೊಸದುರ್ಗ








