ಬೆಂಗಳೂರು :
ಚುನಾವಣೆ ಸಂದರ್ಭದಲ್ಲಿ ತನ್ನ ಪರ ನಿಂತ ಬಿಜೆಪಿಗೆ ಸುಮಲತಾ ಧನ್ಯವಾದ ಹೇಳಿದ್ದು, ತಾವು ಬಿಜೆಪಿಗೆ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ ನಂತರ ಸುಮಲತಾ ಅಂಬರೀಶ್ ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಹಿರಿಯ ನಾಯಕ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಿಜೆಪಿ ಸೇರುವುದಿಲ್ಲ ಎನ್ನುವ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.
ನಂತರ ಮಾಧ್ಯಮದ ಜೊತೆ ಮಾತನಾಡಿದ ಸುಮಲತಾ, “ಪಕ್ಷೇತರ ಅಭ್ಯರ್ಥಿ ಯಾವುದೇ ಪಕ್ಷ ಸೇರುವ ಅವಕಾಶ ನಮ್ಮ ಕಾನೂನಿನಲ್ಲಿ ಇಲ್ಲ. ಹಾಗಾಗಿ ನಾನು ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನನ್ನ ಪರ ನಿಂತಿತ್ತು. ಅವರಿಗೆ ಧನ್ಯವಾದ. ಮಂಡ್ಯ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ,” ಎಂದು ಸುಮಲತಾ ಹೇಳಿದ್ದಾರೆ. ಈ ಮೂಲಕ ಸುಮಲತಾ ಬಿಜೆಪಿ ಸೇರಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಬಿಜೆಪಿಗೆ ಧನ್ಯವಾದ ಹೇಳಿದ್ದಾರೆ. “ಸುನಾಮಿ ರೀತಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಾನು ವೈಯಕ್ತಿಕವಾಗಿ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನ್ನ ಗೆಲುವು ಒಂದು ರೀತಿ ಇತಿಹಾಸ. ಮಂಡ್ಯದ ಜನ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲಾ ಪಕ್ಷದವರು ನನ್ನ ಕೈಜೋಡಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ,” ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ