ಮೈಸೂರು:
ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೇವಿಯ ಅಗ್ರಪೂಜೆಯೊಂದಿಗೆ ಇಂದು ಚಾಲನೆ ನೀಡಲಾಗಿದೆ.
ದಸರಾ ಮಹೋತ್ಸವಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಚಾಲನೆ ನೀಡಿದ್ದಾರೆ. ಇನ್ನು ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೂ ಇವತ್ತು ಚಾಲನೆ ಸಿಗಲಿದೆ. ಬೆಳಗ್ಗೆ 5:10 ರಿಂದ 5:30ರ ನಡುವೆ ರತ್ನಖಚಿತ ಆಸನಕ್ಕೆ ಸಿಂಹ ಜೋಡಣೆ ಮಾಡಲಾತ್ತದೆ. ಬೆಳಗ್ಗೆ 8:05 ರಿಂದ 8:55ರ ನಡುವೆ ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 9:30ಕ್ಕೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಗ್ಗೆ 9:50 ರಿಂದ 10:35 ಕಳಸ ಪೂಜೆ ನೆರವೆರಿಸಲಾಗುತ್ತದೆ. ನಂತರ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ನಡೆಯಲಿದೆ. ಬಳಿಕ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ತರಲಾಗುವುದು. ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಗೋವಿಂದ ಕಾರಜೋಳ, ವಿ. ಸೋಮಣ್ಣ, ಪ್ರತಾಪ್ ಸಿಂಹ, ಸಿ.ಟಿ. ರವಿ, ಜಿ.ಟಿ. ದೇವೇಗೌಡ, ತನ್ವೀರ್ ಸೇಟ್ ಸೇರಿದಂತೆ ಹಲವಾರು ಗಣ್ಯರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿದ್ದಾರೆ.
ಇಂದಿನಿಂದ ಅಕ್ಟೋಬರ್ 8 ರವರೆಗೆ ಒಟ್ಟು ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುವ ಆಚರಣೆ ಅಂದರೆ ಅದೇ ಮೈಸೂರು ದಸರಾ ಮಹೋತ್ಸವ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
