ಹುಬ್ಬಳ್ಳಿ:
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೈಗೊಂಡ ರೀತಿಯ ದಾಳಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿಯಲ್ಲೂ ಮುಂದುವರಿಸಿ ಸೋಮವಾರ (ಮೇ.13) ರಾತ್ರಿ 9.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಹುಬ್ಬಳ್ಳಿ ನಗರದ ವಿವಿಧ ಪ್ರತಿಷ್ಟಿತ ಹೋಟೆಲುಗಳ ಮೇಲೆ ದಾಳಿ ನಡೆಸಿದೆ.
ರಾತ್ರಿ 10 ಗಂಟೆಯ ಸುಮಾರಿಗೆ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್ ನ ಕೊಠಡಿ ಸಂಖ್ಯೆ 307 ರಲ್ಲಿ ಇರಿಸಲಾಗಿದ್ದ, ಸಿ.ಎಸ್.ಶಿವಳ್ಳಿ ಅವರ 11 ಭಾವಚಿತ್ರಗಳು, ಬಂಗಾರದ ಬಣ್ಣ ಲೇಪಿಸಿರುವ 50 ಅರಿಶಿನ, ಕುಂಕುಮದ ಬಟ್ಟಲುಗಳು, ಕುಂದಗೋಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 51 ರಿಂದ 57 ರವರೆಗಿನ ಒಟ್ಟು 7 ಮತದಾರರ ಪಟ್ಟಿಗಳು ಹಾಗೂಕಾಂಗ್ರೆಸ್ ಚಿಹ್ನೆ ಹೊಂದಿರುವ ಕೇಸರಿ, ಬಿಳಿ, ಹಸಿರು ಬಣ್ಣದ ಟೋಪಿಗಳು ಕೂಡ ಸಿಕ್ಕಿರುವುದಾಗಿ ಹೇಳಲಾಗಿದೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಇವುಗಳನ್ನು ಸಂಗ್ರಹಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಿವಕುಮಾರ್ ಚಂದ್ರಶೇಖರ್ ಗೋಕಾವಿ ಎಂಬುವವರ ವಿರುದ್ಧ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಎಫ್ಎಸ್ಟಿ ಅಧಿಕಾರಿಗಳು ಕೂಡ ಸಾಥ್ ನೀಡಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೆ ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
