ತುಮಕೂರು:
ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿಕುಮಾರ್ ಅವರ ಮನೆ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸ್‍ಐಟಿ 7ನೆ ಕ್ರಾಸ್‍ನಲ್ಲಿರುವ ರವಿಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ತುರುವೇಕೆರೆ ತಾಲ್ಲೂಕಿನ ರಾಯಸಂದ್ರದಲ್ಲಿರುವ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದೇ ರೀತಿ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ತುಮಕೂರಿನ ಗಂಗೋತ್ರಿ ಬಡಾವಣೆಯ ಅರಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ತಡರಾತ್ರಿ ಸುಮಾರು 12 ಗಂಟೆಯವರೆಗೂ ರಾಯಸಂದ್ರ ರವಿಕುಮಾರ್ ಅವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದರು.
ನಿನ್ನೆಯಿಂದ ಪರಿಶೀಲನೆ ಆರಂಭವಾಗಿದ್ದು, ಮುಂಜಾನೆವರೆಗೂ ಪರಿಶೀಲನೆ ನಡೆಸಿ ತೆರಳಿದ ಐಟಿ ತಂಡ, ಇಂದು ಮಧ್ಯಾಹ್ನ 11 ಗಂಟೆಗೆ ಬೆಂಗಳೂರಿನ ಐಟಿ ಕಚೇರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟೀಸ್ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ