ಮೈಸೂರು:

ಜೆಡಿಎಸ್ ಮುಖಂಡರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕಾರ್ಯಕರ್ತರು ಜೈಕಾರ ಹಾಕಿ ಜೆಡಿಎಸ್ ಮುಖಂಡರಿಗೆ ಮುಜಗರವನ್ನುಂಟು ಮಾಡಿದ ಘಟನೆ ನಡೆದಿದೆ.
ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಇಂದು ನಡೆಯುತ್ತಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಮಾತನಾಡಿ, ’10 ತಿಂಗಳ ಹಿಂದೆ ನಡೆದ ವಿಧಾನಸಭೆಯ ಚುನಾವಣೆಗೂ ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ. ಆಗ ನೀವೆಲ್ಲರೂ ಜೆಡಿಎಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿ ಸಾಕಷ್ಟು ನೋವು ಅನುಭವಿಸಿದ್ದೀರಿ. ಈಗ ಲೋಕಸಭಾ ಚುನಾವಣೆಗೆ ಒಪ್ಪಂದವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿರಿ’ ಎಂದು ಮನವಿ ಮಾಡಿದರು.
ಇದರಿಂದ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರು ಕೆಂಡಾಮಂಡಲರಾಗಿ, ‘10 ತಿಂಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪರ ಕೆಲಸ ಮಾಡಿ ಪೊಲೀಸ್ ಸ್ಟೇಷನ್, ಕೋರ್ಟ್ ಮೆಟ್ಟಿಲು ಹತ್ತಿದ್ದೇವೆ. ಈಗ ನೀವು ನಾಯಕರು ಒಪ್ಪಂದ ಮಾಡಿಕೊಂಡು ಬಂದರೆ ನಾವೀಗ ವೋಟ್ ಹಾಕಬೇಕೆ, ಕೆಲಸ ಮಾಡಬೇಕೆ’ ಎಂದು ಪ್ರಶ್ನಿಸಿ ‘ನರೇಂದ್ರ ಮೋದಿಗೆ ಜೈ’ ಎಂದು ಕೂಗುವ ಮೂಲಕ ಗದ್ದಲ ಹೆಚ್ಚುವಂತೆ ಮಾಡಿದರು.
ಬಳಿಕ ಜಿ.ಟಿ.ದೇವೇಗೌಡ ಅವರು ಕಾರ್ಯಕರ್ತರ ಬಳಿ ಬಂದು ಸಮಾಧಾನಗೊಳಿಸಿದರು. ನಂತರ ‘ಜೆಡಿಎಸ್ ಪಕ್ಷಕ್ಕೆ ಜೈ’ ಎಂದು ಹೇಳಿಸುವ ಮೂಲಕ ಅಸಮಾಧಾನ ಶಮನಗೊಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








