ಮೈಸೂರು:
ಪತ್ರಕರ್ತೆ ಆಗಬೇಕೆಂಬ ಕನಸು ಕಂಡಿದ್ದ ಯುವತಿಯ ಬದುಕನ್ನು ಅಪ್ರಾಪ್ತ ಯುವಕನೋರ್ವ ತನ್ನ ಜಾಲಿರೈಡ್ ಗೆ ಬಲಿ ಪಡೆದಿರುವ ದುರ್ಘಟನೆ ನಗರದಲ್ಲಿ ನಡೆದಿದೆ.
ಅಶ್ವಿನಿ(18) ಮೃತ ಪತ್ರಿಕೋದ್ಯಮ ವಿದ್ಯಾರ್ಥಿನಿ. ಈಕೆ ಗುಂಡ್ಲುಪೇಟೆ ತಾಲೂಕಿನ ಹುಲ್ಲೇಪುರ ಗ್ರಾಮದ ನಿವಾಸಿಯಾಗಿದ್ದು, ಮಹಾರಾಣಿ ಕಾಲೇಜಿನ ಎರಡನೇ ವರ್ಷದ ಪದವಿಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು.
ನಿನ್ನೆ ಅಪ್ರಾಪ್ತ ಯುವಕನೋರ್ವ ಸ್ಕಾರ್ಪಿಯೊ ಕಾರನ್ನು ರಾಮಸ್ವಾಮಿ ವೃತ್ತದಿಂದ ಮುಡಾ ವೃತ್ತದ ಕಡೆಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬರುತ್ತಿದ್ದ. ಅಶ್ವಿನಿ ಸಿಟಿ ಬಸ್ನಿಂದ ಇಳಿದು ಕಾಲೇಜಿಗೆ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ವಿದ್ಯಾರ್ಥಿನಿ ಅಶ್ವಿನಿ ಹಾಗೂ ಆಕೆಯ ಸ್ನೇಹಿತೆಗೆ ಗುದ್ದಿದ್ದಾನೆ. ನಂತರ, ವಾಹನ ನಿಲ್ಲಿಸದೇ ಇನ್ನಷ್ಟು ವೇಗವಾಗಿ ರೋಟರಿ ಜಂಕ್ಷನ್ ಕಡೆಗೆ ಬಂದು ಎಡಕ್ಕೆ ಚಾಲನೆ ಮಾಡಿದ್ದಾನೆ. ಅಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಮೈಸೂರು ನಗರಾಭಿವೃದ್ಧಿ ಕಾರ್ಯದರ್ಶಿ ಕಾರಿಗೆ ಗುದ್ದಿದ್ದಾನೆ. ಇಷ್ಟೊತ್ತಿಗೆ ವಾಹನದ ಟೈಯರ್ ಸಿಡಿದಿದೆ.
ಅಪಘಾತವಾದಾಗ ವಾಹನದ ಚಕ್ರ ಅಶ್ವಿನಿ ಅವರ ಹೊಟ್ಟೆಯ ಮೇಲೆ ಹರಿದಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಅಶ್ವಿನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಾಲಿಸಲಾಗಿತ್ತಾದರೂ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ.ಈ ದುರಂತ ವಿದ್ಯಾರ್ಥಿನಿ ಕುಟುಂಬವನ್ನ ದುಃಖದ ಮಡಿಲಿಗೆ ದೂಡಿದೆ.
ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿದ 17 ವರ್ಷದ ಹುಡುಗನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಘಾತ ಮಾಡಿದ ಹುಡುಗ ಹಾಗೂ ಈತನಿಗೆ ವಾಹನ ನೀಡಿದ ಮಂಜುನಾಥ್ ವಿರುದ್ಧ ಕೆ.ಆರ್. ಸಂಚಾರ ವಿಭಾಗದಲ್ಲಿ ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
