ಬೆಂಗಳೂರು:
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದ ಶಾಸಕ ಕಂಪ್ಲಿ ಗಣೇಶ್‍ಗೆ ಇಂದು ಜಾಮೀನು ಸಿಕ್ಕಿದೆ.
ಗಣೇಶ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಇಂದು ಶಾಸಕರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಈ ಮೂಲಕ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿ 62 ದಿನಗಳ ಬಳಿಕ ಕಂಪ್ಲಿ ಗಣೇಶ್ ಜಾಮೀನು ಪಡೆಯುವ ಮೂಲಕ ಜೈಲಿನಿಂದ ಹೊರಬರುತ್ತಿದ್ದಾರೆ.
ಈ ಹಿಂದೆ ಆನಂದ್ ಸಿಂಗ್ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು, ಈ ಹಿನ್ನೆಲೆ ಅರ್ಜಿ ತಿರಸ್ಕಾರ ಪ್ರಶ್ನಿಸಿ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇದೇ ವೇಳೆ ಗಣೇಶ್ ಅವರ ಪರ ವಕೀಲರು ಆನಂದ್ ಸಿಂಗ್ ನೀಡಿರುವ ದೂರಿನಲ್ಲಿ ಬರೀ ಸುಳ್ಳಿದೆ. ಗಣೇಶ್ ಗೆ ಕೊಲೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ, ಹಾಗಾಗಿ ಜಾಮೀನು ಅರ್ಜಿಯನ್ನು ಪರಿಗಣನೆಗೆ ತೆಗದುಕೊಳ್ಳುವಂತೆ ಮನವಿ ಮಾಡಿದ್ದರು.
ಜನವರಿ 19 ರಂದು ರಾಮನಗರದ ಬಿಡದಿಯ ಈಗಲ್ಟನ್ ದಿ ಗಾಲ್ಫ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಗಣೇಶ್ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದತೆ ಜನವರಿ 21 ರಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
