ವಿಜಯಪುರ:
ಕೋರ್ಟ್ ಹೊರ ಆವರಣದಲ್ಲಿ ಇಂದು ಬೆಳಗ್ಗೆ 4 ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್‌ನಿಂದಾಗಿ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಾಸಿದ್ದ ಮಲಕಾರಿ ಒಡೆಯರ್(4) ಎಂಬಾತ ಮೃತ ಬಾಲಕ. ತಂದೆಯೊಂದಿಗೆ ಕೌಟುಂಬಿಕ ಕಲಹದ ವಿಚಾರವಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದ.
ತಂದೆ ನೀರು ಕುಡಿಯಲೆಂದು ಹೋದ ವೇಳೆ ಬಾಲಕ ಕೋರ್ಟ್ ಮುಂಭಾಗದ ಪಾದಚಾರಿ ರಸ್ತೆ ಮೇಲಿದ್ದ ಬೀದಿ ದೀಪದ ಕಂಬದ ಬಳಿ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಬಾಕ್ಸ್ ಮುಟ್ಟಿದ್ದಾನೆ. ಪರಿಣಾಮ ವಿದ್ಯುತ್ ತಗುಲಿ ಬಾಲಕ ಒದ್ದಾಡಿದ್ದಾನೆ.
ನೀರು ತುಂಬಿಕೊಂಡು ಬಂದ ಮಲಕಾರಿ ಅವರು ಮಗ ಬಿದ್ದು ಒದ್ದಾಡುತ್ತಿರುವುದನ್ನು ನೋಡಿ ರಕ್ಷಣೆಗೆ ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ತಗುಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವುದಕ್ಕೂ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಮಲಕಾರಿ ಒಡೆಯರ್ ಎನ್ನುವರ ಏಕೈಕ ಪುತ್ರ. 6 ಮಂದಿ ಹೆಣ್ಣು ಮಕ್ಕಳ ಬಳಿಕ ಈತ ಜನಿಸಿದ್ದ ಹೀಗಾಗಿ ಆತನ ಮೇಲೆ ಎಲ್ಲರಿಗೂ ಪ್ರೀತಿ ಇತ್ತು. ಬಾಲಕನ ಸಾವಿನಿಂದ ಮಲಕಾರಿ ದಂಪತಿ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ಜಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ