ಬೆಂಗಳೂರು:
ಕುರುಬ ಸಮುದಾಯವನ್ನು ಎಸ್‌ಟಿ (ಪರಿಶಿಷ್ಟ ಪಂಗಡ)ಕ್ಕೆ ಸೇರಿಸುವ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಲು ಮುಂದಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ಹೀಗೊಂದು ಸೂಚನೆಯನ್ನು ಬುಡಕಟ್ಟು ಇಲಾಖೆಗೆ ನೀಡಿದ್ದು, ಕುರುಬ ಸಮುದಾಯವನ್ನು ಎಸ್‌ಟಿ ಗೆ ಸೇರಿಸಬೇಕೆಂದು ಹಲವು ಸಂಘ-ಸಂಸ್ಥೆಗಳು, ಮಠಗಳು ಒತ್ತಾಯ ಮಾಡಿದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಹೇಳಿದೆ.
ಕುರುಬ ಸಮಾಜದ ಸಂಸ್ಕೃತಿ, ಆಚಾರ- ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಭೌಗೋಳಿಕ ಅಂಶಗಳ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನವನ್ನು ರಾಜ್ಯದ ಜಿಲ್ಲೆಗಳಲ್ಲಿ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರವು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸೂಚಿಸಿದೆ. ಅಧ್ಯಯನಕ್ಕಾಗಿ 40 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಈ ಪ್ರಸ್ತಾವನೆಯ ಹಿಂದೆ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುರುಬ ಸಮುದಾಯವಿದ್ದು, ಅವರ ಬೆಂಬಲದ ಲಾಭವನನ್ನು ಪಡೆಯಲು ಈ ನಿರ್ಣಯ ಸಹಾಯಕಾರಿಯಾಗಲಿದೆ.
ಪ್ರಸ್ತುತ ಕುರುಬ ಜನಾಂಗ ಹಿಂದುಳಿದ ವರ್ಗಗಳ (2ಎ) ಅಡಿಯಲ್ಲಿ ಬರುತ್ತಿದ್ದು, ಶೇ.15 ರಷ್ಟು ಮೀಸಲು ಲಭ್ಯವಾಗುತ್ತಿದೆ. ಎಸ್‌ಟಿಗೆ ಸೇರಿಸುವುದರಿಂದ ಕುರುಬ ಜನಾಂಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ