ಕೊಡಗು :
ವಿರಾಜಪೇಟೆ ತಾಲೂಕಿನ ಮಾಕುಟ್ಟ ಬಳಿ ತಡೆಗೋಡೆ ಕುಸಿತದಿಂದಾಗಿ ಕೊಡಗಿನ ಮೂಲಕ ಹಾದು ಹೋಗುವ ಅಂತರ್ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅರ್ಧ ಭಾಗದಷ್ಟು ಹೆದ್ದಾರಿ ಕುಸಿದಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಕಳೆದ ಬಾರಿ ಕುಸಿದಿದ್ದ ಕರ್ನಾಟಕ-ಕೇರಳ ಹೆದ್ದಾರಿಯಲ್ಲಿ ಮತ್ತೆ ತಡೆಗೋಡೆ ಕುಸಿದಿರುವುದು ಆತಂಕ ಸೃಷ್ಟಿಸಿದೆ. ಇದರಿಂದ ಕೊಡಗು-ಕೇರಳಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ವಾಹನ ಸಂಚಾರ ಬಂದ್ ಮಾಡಿ ಪರ್ಯಾಯ ಮಾರ್ಗಕ್ಕೆ ಸೂಚನೆ ನೀಡಿದೆ. ಕೇರಳಕ್ಕೆ ತೆರಳುವ ವಾಹನಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿವೆ.
ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿದ್ದು ಆಗಸ್ಟ್ 9ರವರೆಗೆ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ