ಅಂತರ್ಜಲ ವೃದ್ಧಿಗಾಗಿ 8 ಕೋಟಿ ರೂ. ಯೋಜನೆಗೆ ಚಾಲನೆ!!

ಕೊರಟಗೆರೆ :

      ತಾಲ್ಲೂಕಿನಲ್ಲಿ ಅಂತರ್ಜಲ ವೃದ್ದಿಗೆ ಮಳೆಯ ನೀರನ್ನು ಸಂರಕ್ಷಿಸುವ ವಿವಿಧ ಯೋಜನೆಗಳಿಗೆ ಪ್ರಸ್ತುತ ಎಂಟು ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿಪರಮೇಶ್ವರ ತಿಳಿಸಿದರು.

      ಅವರು ಕಿರು ನೀರಾವರಿ ಇಲಾಖೆಯಿಂದ ನಿರ್ಮಾಣ ಗೊಳ್ಳುತ್ತಿರುವ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬರಕಾ ಗ್ರಾಮದ ಸುವರ್ಣಮುಖಿ ನದಿಗೆ ಸುಮಾರು 2 ಕೋಟಿ ರೂ.ಗಳ ವೆಚ್ಚದ ಪಿಕಪ್ ನಿರ್ಮಾಣ, ಕಸಬಾ ಹೋಬಳಿ ಪೆಮ್ಮದೇವರಹಳ್ಳಿ ಗ್ರಾಮದ ಬಳಿ 1.5 ಕೋಟಿ ರೂ.ಗಳಲ್ಲಿ ಚೆಕ್ ಡ್ಯಾಂ ಮತ್ತು ಸೇತುವೆ ನಿರ್ಮಾಣ, 1 ಕೋಟಿ ರೂ.ಗಳ ವೆಚ್ಚದಲ್ಲಿ ಒಡೆದು ಹೋಗಿರುವ ಗೌಡನಕೆರೆ ಅಭಿವೃದ್ದಿ, ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ ಬಳಿ 1.5 ಕೋಟಿ ವೆಚ್ಚದಲ್ಲಿ ಡ್ಯಾಂ ಮತ್ತು ಸೇತುವೆ ನಿರ್ಮಾಣ ಮತ್ತು ಮಾವತ್ತೂರು ಗ್ರಾಮದ ಹತ್ತಿರ 2 ಕೋಟಿ ರೂ.ಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

      ಅಂತರ್ಜಲವು ದಿನೆ ದಿನೆ ಕುಸಿಯುತ್ತಿದೆ. ಬಯಲು ಸೀಮೆಯಲ್ಲಿ ಕೊಳವೆ ಬಾವಿಗಳ ನೀರನ್ನೇ ಬೇಸಾಯಕ್ಕೆ ಮೂಲವಾಗಿ ನಂಬಿರುವ ರೈತರು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳ ಜೊತೆಗೆ ಮಳೆಗಾಲದ ನೀರನ್ನು ಶೇಖರಿಸಿ, ಅದರಿಂದ ಸುತ್ತ ಮುತ್ತಲ ಪ್ರದೇಶಕ್ಕೆ ಅಂತರ್ಜಲ ವೃದ್ದಿ ಮತ್ತು ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಸಹ ಒದಗಿಸಲು ಸಹಾಯವಾಗುತ್ತದೆ. ಈ ದೃಷ್ಟಿಯಿಂದ ಬರುವ ಮಳೆಗಾಲಕ್ಕೆ ನದಿ ಮತ್ತು ಹಳ್ಳಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮತ್ತು ಕೆರೆಗಳ ದುರಸ್ಥಿ ಕೆಲಸವನ್ನು ಮಾಡಲಾಗುತ್ತಿದೆ. ಈ ಕೆಲಸವನ್ನು ಸರ್ಕಾರದಿಂದ ವಿಶೇಷ ಅನುದಾನ ಕೋರಿ ಮತ್ತಷ್ಟು ಕಾಮಗಾರಿಗಳನ್ನು ಮಾಡುವ ಕೆಲಸ ಮಾಡಲಾಗುವುದು. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯವಿರಬಾರದು. ರೈತರ ಮತು ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸಗಳಾದರೆ ಅಭಿವೃದ್ದಿ ತಾನಾಗಿಯೇ ರೂಪುಗೊಳ್ಳುತ್ತದೆ ಎಂದರು.

      ಇದೇ ಸಂದರ್ಭದಲ್ಲಿ ಚನ್ನರಾಯನದುರ್ಗ ಹೋಬಳಿಯ ಬರಕ ಮತ್ತು ಗಟ್ಲಗೊಲ್ಲಹಳ್ಳಿ ಮಧ್ಯದಲ್ಲಿನ ಚೆಕ್ ಡ್ಯಾಂ ಬಳಿಯ ರೈತರುಗಳಾದ ಶಂಕರಪ್ಪ ಮತ್ತಿತರ ರೈತರುಗಳೊಂದಿಗೆ ಚರ್ಚಿಸಿದ ಶಾಸಕ ಡಾ.ಜಿ.ಪರಮೇಶ್ವರ್, ತಮ್ಮ ಅವಧಿಯಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

      ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಪ್ರೇಮಾಮಹಾಲಿಂಗಪ್ಪ, ಮಾಜಿ ಸದಸ್ಯ ಪ್ರಸನ್ನಕುಮಾರ್, ತಾ.ಪಂ.ಅಧ್ಯಕ್ಷೆ ನಾಜೀಮಾಭೀ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ಸುಮಾರಾಜು, ಗ್ರಾ.ಪಂ.ಅದ್ಯಕ್ಷೆ ಲಕ್ಷ್ಮೀ, ತಹಸೀಲ್ದಾರ್ ಗೋವಿಂದರಾಜು, ಇ.ಓ.ಶಿವಪ್ರಕಾಶ್, ಕಿರು ನೀರಾವರಿ ಇಲಾಖಾ ಎಂಜಿನಿಯರ್ ರಮೇಶ್, ಪ.ಪಂ.ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಟರಾಜು, ಕೆ.ಪಿ.ಸಿ.ಸಿ.ಕಾರ್ಯದರ್ಶಿ ಬಿ.ಎಸ್.ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಮುಖಂಡರುಗಳಾದ ಚಂದ್ರಶೇಖರ್‍ಗೌಡ, ಕಿರಣ್‍ಕುಮಾರ್, ಗಟ್ಲಹಳ್ಳಿ ರವಿಕುಮಾರ್, ಗೊಂದಿಹಳ್ಳಿ ರಂಗರಾಜು, ಚಿಕ್ಕರಂಗಯ್ಯ, ಮೈಲಾರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link