ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ ; ಸಿದ್ದರಾಮಯ್ಯಗೆ HDK ಸವಾಲ್!!

ಬೆಂಗಳೂರು:

     ಪ್ರಾದೇಶಿಕ ಪಕ್ಷ ಕಟ್ಟಿ ನಿಮ್ಮ ಸಾಮಥ್ರ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. 

     ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರಿದಿದೆ. ಶುಕ್ರವಾರ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಆಡಿದ ಮಾತಿಗೆ ಇಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 

ಎಚ್ ಡಿಕೆ ಸರಣಿ ಟ್ವೀಟ್ ಗಳು ಇಲ್ಲಿದೆ :

Congress in karnataka: Senior Congress men must make way for youth: MLA K  Sudhakar

1. ಸಿದ್ದರಾಮಯ್ಯ ಅವರ ಉಡಾಫೆ ಮಾತುಗಳಿಗೆ ಪ್ರತಿಕ್ರಿಯಿಸಬಾರದೆಂದು ಇಚ್ಚಿಸಿದ್ದೆ. ಆದರೆ, ಚಾಮುಂಡೇಶ್ವರಿಯಲ್ಲಿನ ಭಾಷಣದಿಂದ ಹೊಮ್ಮಿರುವ ಅವರ ದ್ವಂದ್ವ ನಿಲುವಿನ ಬಗ್ಗೆ ಮಾತಾಡಬೇಕಿದೆ. ಅಲ್ಲಿ ಅವರು ಏನಾದರೂ ಹೇಳಿರಲಿ. ಅದರೆ, ಒಳಒಪ್ಪಂದದ ಆರೋಪ, ಕುಮಾರಸ್ವಾಮಿಯನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂಬ ದ್ವಂದ್ವದ ಬಗ್ಗೆ ಮಾತಾಡುವೆ.

2. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌-ಬಿಜೆಪಿ ಒಳಒಪ್ಪಂದ ಮಾಡಿಕೊಂಡವು, ಅದರಲ್ಲಿ ಕಾಂಗ್ರೆಸ್ಸಿಗರೂ ಸೇರಿದರು, ಬಾದಾಮಿಯಲ್ಲಿ ಗೆಲ್ಲದೇ ಹೋಗಿದ್ದರೆ ಭವಿಷ್ಯ ಕತ್ತಲಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೆ ಒಪ್ಪಂದವಾಗಿದ್ದರೆ, ಅದು ಬಾದಾಮಿಗೂ ಅನ್ವಯಿಸುತ್ತಿರಲಿಲ್ಲವೇ? ಬಾದಾಮಿಯಲ್ಲಿ ಅವರನ್ನು ಗೆಲ್ಲಲು ಬಿಡುತ್ತಿದ್ದೆವೆ?

3. 2009-2010ರ 20 ಉಪಚುನಾವಣೆಗಳನ್ನು ಸಿದ್ದರಾಮಯ್ಯ ಒಮ್ಮೆ ಪರಾಮರ್ಶೆ ಮಾಡಲಿ. ಆ ಹೊತ್ತಿನಲ್ಲಿ ತಮ್ಮನ್ನು ಕಾಂಗ್ರೆಸ್‌ ಕಡೆಗಣಿಸಿತ್ತು ಎಂಬ ಕಾರಣಕ್ಕೆ ಅವರು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಅವರ ಆತ್ಮ ನೆನಪಿಸುತ್ತದೆ. ಅದರ ಪರಿಣಾಮವಾಗಿ ಕಾಂಗ್ರೆಸ್‌ ಎಷ್ಟು ಸ್ಥಾನ ಗೆದ್ದಿತ್ತು ಎಂಬುದನ್ನೂ ಮನದಟ್ಟು ಮಾಡಿಸುತ್ತದೆ.

4. 2013ರ ಚುನಾವಣೆಯತ್ತ ಅವರು ಒಮ್ಮೆ ನೋಡಲಿ. ಆಗ ಅವರು ಯಾರನ್ನೆಲ್ಲ ಸೋಲಿಸಿದ್ದರು, ಕೊರಟಗೆರೆಯಲ್ಲಿ ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡು, ಯಾರ ಭವಿಷ್ಯವನ್ನು ಕತ್ತಲಲ್ಲಿಟ್ಟಿದ್ದರು ಎಂಬುದನ್ನು ಮನನ ಮಾಡಿಕೊಳ್ಳಲಿ. 2013ರ ಚುನಾವಣೆಯನ್ನು ಪರಾಮರ್ಶಿಸಿದರೆ, ಪಕ್ಷದ್ರೋಹದ ಆಧಾರದ ಮೇಲೆ ಅವರು ಕಾಂಗ್ರೆಸ್‌ ಬಿಡಬೇಕು! ಇದು ಅವರ ದ್ವಂದ್ವ.

5. ನನ್ನನ್ನು ಸೋಲಿಸಿದವರು, ಆತ್ಮವಿಮರ್ಶೆ ಮಾಡಿಕೊಂಡು ತಾವೇ ಪಕ್ಷಬಿಟ್ಟು ಹೋಗಬೇಕು ಎಂದು ಹೇಳಿದ್ದೀರಿ. 2009-10ರ ಉಪಚುನಾವಣೆ, 2013ರ ಚುನಾವಣೆಗಳಲ್ಲಿ ಒಳ ಒಪ್ಪಂದ ಮಾಡಿಕೊಂಡ ನಿಮ್ಮ ಆತ್ಮವಿಮರ್ಶೆ ಯಾವಾಗ? ಕಾಂಗ್ರೆಸ್‌ ಬಿಡುವುದು ಯಾವಾಗ? ಈಗಾಗಲೇ ಒಂದು ಬಾರಿ ತಾಯಿಯಂಥ ಪಕ್ಷಕ್ಕೆ ದ್ರೋಹ ಮಾಡಿದ ನಿಮ್ಮ ಉತ್ತರ ಕೇಳಲು ಕಾತರನಾಗಿದ್ದೇನೆ.

6. 2018ರಲ್ಲಿ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಹೈಕಮಾಂಡ್‌ನ ನಿರ್ಧಾರವಾಗಿತ್ತು ಎಂದು ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಭಾಷಣದ ವೇಳೆ, ನಾನು ಒಪ್ಪದೇ ಹೋಗಿದ್ದಿದ್ದರೆ ಕುಮಾರಸ್ವಾಮಿ ಅವರನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ. ಇಲ್ಲಿ ದ್ವಂದ್ವ ಇಲ್ಲವೇ?

7. ಮೈತ್ರಿ ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಸಿದ್ದವನದಲ್ಲಿ ಕುಳಿತು ಸರ್ಕಾರ ಬೀಳಿಸುವ ಚರ್ಚೆ ನಡೆಸಿದವರು ಸಿದ್ದರಾಮಯ್ಯ ಅಲ್ಲವೇ? ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ ಶಾಸಕರಲ್ಲಿ ಬಹುತೇಕರು ಅವರ ಬೆಂಬಲಿಗರಾಗಿರಲಿಲ್ಲವೇ? ಆದರೂ, ಸರ್ಕಾರ ಬೀಳಿಸಿದ್ದರ ಅಪವಾದದಿಂದ ಪಾರಾಗಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಇದು ಅವರ ಕಪಟ ನೀತಿ.

8. ಕುಮಾರಸ್ವಾಮಿ ಸಿಎಂ ಆಗಿ ಕಚೇರಿಗೇ ಬರುತ್ತಿರಲಿಲ್ಲವಂತೆ, ತಾಜ್‌ವೆಸ್ಟ್‌ಎಂಡ್‌ನಲ್ಲಿ ಇರುತ್ತಿದ್ದರಂತೆ. ಅಹೋರಾತ್ರಿ ಜನತಾ ದರ್ಶನ ತಾಜ್‌ವೆಸ್ಟ್‌ಎಂಡ್‌ನಲ್ಲಿ ನಡೆಯುತ್ತಿತ್ತೋ? ಸಿಎಂ ಕಚೇರಿಯಲ್ಲಿ ನಡೆಯುತ್ತಿತ್ತೋ ಸಿದ್ದರಾಮಯ್ಯನವರೇ? ಬಾದಾಮಿಯಲ್ಲಿ ಈಗ ನಡೆಯುತ್ತಿರುವ 1200 ಕೋಟಿ ಕಾಮಗಾರಿಗಳು ತಾಜ್‌ವೆಸ್ಟ್‌ಎಂಡ್‌ನದ್ದ?

9. ಸಿಎಂ ಸ್ಥಾನದಿಂದ ಇಳಿದ ನಂತರ ಸಿದ್ದರಾಮಯ್ಯ ಸರ್ಕಾರಿ ನಿವಾಸ ತೊರೆಯಲಿಲ್ಲ. ಆ ವಿಚಾರದಲ್ಲಿ ಕಿಂಚಿತ್ತೂ ನಾಚಿಕೆ ಪ್ರದರ್ಶಿಸಲಿಲ್ಲ. ತಾವು ಸಿಎಂ ಆಗಿದ್ದಾಗ 6 ಗಂಟೆಗೆ ಹೇಳದೇ ಕೇಳದೇ ಕಚೇರಿ ತೊರೆದು ಅಜ್ಞಾತರಾಗುತ್ತಿದ್ದ ಸಿದ್ದರಾಮಯ್ಯ, ರಾತ್ರಿ 12 ಗಂಟೆ ವರೆಗೆ ಕಚೇರಿಯಲ್ಲಿ ದುಡಿಯುತ್ತಿದ್ದ ನನ್ನ ಬಗ್ಗೆ ಮಾತನಾಡುವ ನೈತಿಕತೆ ಉಳ್ಳವರೇ?

10. 37 ಸ್ಥಾನ ಗೆದ್ದಿದ್ದ ಜೆಡಿಎಸ್‌ಗೆ ನಾವು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟೆವು ಎಂದು ಸಿದ್ದರಾಮಯ್ಯ ಪದೇ ಪದೆ ಹೇಳುತ್ತಾರೆ. ಅದು 37 ಸ್ಥಾನವಾಗಲಿ, ಅಥವಾ 100 ಸ್ಥಾನಗಳಾದರೂ ಆಗಿರಲಿ. ಅದು ಜನಾದೇಶ. ಆ ವಿಚಾರದಲ್ಲಿ ಮೂದಲಿಕೆ ಮಾಡುವ ಸಿದ್ದರಾಮಯ್ಯ ಅವರಿಗೆ ಜನರ ಆಶಯ, ಅಭಿಪ್ರಾಯಗಳನ್ನು ಒಪ್ಪುವಂಥ ಮನಸ್ಥಿತಿಯೇ ಇಲ್ಲ.

11.ಜೆಡಿಎಸ್‌ ಸ್ಥಾನ ಗಳಿಕೆ, ದೇವೇಗೌಡರು, ನನ್ನ ಬಗ್ಗೆ ಅಡಿಗಡಿಗೂ ಟೀಕಿಸುವ ಸಿದ್ದರಾಮಯ್ಯರಿಗೆ ಒಂದು ಸವಾಲು. ರಾಷ್ಟ್ರೀಯ ಪಕ್ಷದ ನೆರಳಲ್ಲಿರುವ ತಾವು ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ. ನಂತರ ಜೆಡಿಎಸ್‌ ಸ್ಥಾನ ಗಳಿಕೆ, ನಮ್ಮ ನಾಯಕತ್ವಗಳ ಬಗ್ಗೆ ಮಾತಾಡಿ. ಆಗ ನಿಮ್ಮ ತಾಕತ್ತು ಒಪ್ಪೋಣ.

12.ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ. ಇನ್ನೆಂದು ಜೆಡಿಎಸ್‌ನ ಸ್ಥಾನ ಗಳಿಕೆ ಬಗ್ಗೆ ಲಘುವಾಗಿ ಮಾತಾಡಬೇಡಿ. ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಲು ಬೇಕಿರುವ ನಾಯಕತ್ವ, ಅದು ಬೇಡುವ ಶ್ರಮದ ಬಗ್ಗೆ ನಿಮಗೆ ಅರಿವಿಲ್ಲ. ನಿಮಗೆ ಅದು ಸಾಧ್ಯವೂ ಇಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap