ಕುಣಿಗಲ್:
ಎರಡು ಕಾಂಗ್ರೆಸ್ ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ನಡೆದಿದೆ.
ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಮುಗಿಬಿದ್ದರು. ಪಟ್ಟಣದ 17ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಬ್ದುಲ್ ಹಮೀದ್ ಅವರ ಸಂಬಂಧಿ ಅಸ್ಮಾ ಅವರಿಗೆ ಬಿ ಫಾರಂ ನೀಡಲಾಗಿತ್ತು. ಅಬ್ದುಲ್ ಹಮೀದ್ ಬಿ.ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸುವಾಗ ಪಟ್ಟಣದ ಪ್ರವಾಸಿ ಮಂದಿರದ ಬಳಿ ಇದೇ ವಾರ್ಡ್‍ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಬೀರ್ ಮತ್ತು ಬೆಂಬಲಿಗರು ಹಮೀದ್ ಬಳಿ ಇದ್ದ ಕಾಂಗ್ರೆಸ್ ಬಿ. ಫಾರಂ ಮತ್ತು ದಾಖಲಾತಿಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ತಾಲ್ಲೂಕು ಕಚೇರಿಗೆ ಆಗಮಿಸಿದ ಅಬ್ದುಲ್ ಹಮೀದ್ ಮತ್ತು ಬೆಂಬಲಿಗರು ಜಬೀರ್ ಬೆಂಬಲಿಗರೊಂದಿಗೆ ಮಾತಿನ ಚಕಮಕಿಗೆ ಇಳಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಬಡಿದಾಡಿಕೊಂಡರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಿಪಿಐ ಬಾಲಾಜಿ ಸಿಂಗ್, ಪಿಎಸ್‍ಐಗಳಾದ ಪುಟ್ಟೇಗೌಡ, ಮಂಜು ಹಾಗೂ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.
ನಂತರ ಬಿ.ಫಾರಂ ಕಿತ್ತುಕೊಂಡು ಪರಾರಿಯಾಗಿದ್ದ ಜ್ಹಬೀರ್‍ನನ್ನು ಬಂಧಿಸಿ ಬಿ.ಫಾರಂ ಮತ್ತು ದಾಖಲಾತಿಗಳನ್ನು ಅಬ್ದುಲ್ ಹಮೀದ್‍ಗೆ ಕೊಡಿಸಿದ ನಂತರ ನಾಮಪತ್ರ ಸಲ್ಲಿಸಿದರು.
ಕಣ್ಣೀರು ಹಾಕಿದ ಆಕಾಂಕ್ಷಿ:
ಪುರಸಭೆಯ 17ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಬಿಗ್ ಫೈಟ್ ಏರ್ಪಟ್ಟಿತ್ತು. ಹಿರಿಯ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ರೆಹಮಾನ್ ಷರೀಫ್, ಜೆಡಿಎಸ್‍ನಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಬ್ದುಲ್ ಹಮೀದ್ ನಡುವೆ ಟಿಕೆಟ್ ಹಣಾಹಣಿ ನಡೆದಿತ್ತು. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಅಬ್ದುಲ್ ಹಮೀದ್ ಪಾಲಾಯಿತು. ಇದರಿಂದ ಆಕ್ರೋಶಕೊಂಡು ರೆಹಮಾನ್ ಷರೀಫ್ ಮತ್ತು ಬೆಂಬಲಿಗರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಆಗಮಿಸಿದರು. ಶಾಸಕ ಡಾ.ರಂಗನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ದ ಧಿಕ್ಕಾರ ಕೂಗಿದರು.
ಈ ವೇಳೆ ಮಾತನಾಡಿದ ರೆಹಮಾನ್ ಷರೀಫ್ ಕಳೆದ 47 ವರ್ಷದಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದರೂ ಇತ್ತೀಚೆಗೆ ಜೆಡಿಎಸ್‍ನಿಂದ ಬಂದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆ. ನಾನು ಮಾಡಿದ ಅನ್ಯಾಯವಾದರೂ ಏನು ? ಎಂದು ಬೆಂಬಲಿಗರ ಮುಂದೆ ಕಣ್ಣಿರು ಹಾಕಿದರು. ಬೇರೆ ಪಕ್ಷದವರು ಕರೆದರೂ ನಾನು ಹೋಗದೆ 17ನೇ ವಾರ್ಡ್ ಸೇರಿದಂತೆ ನಾಲ್ಕು ವಾರ್ಡ್‍ಗಳಲ್ಲಿ ನನ್ನ ಸಂಬಂಧಿಕರನ್ನುಪಕ್ಷೇತರವಾಗಿ ಸ್ಪರ್ಧೆಗೆ ಇಳಿಸಿದ್ದು ಫಲಿತಾಂಶದಲ್ಲಿ ನನ್ನ ತಾಕತ್ ಏನೆಂದು ಕಾಂಗ್ರೆಸ್ ನಾಯಕರುಗಳಿಗೆ ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಘಟನೆಯು ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
