ತುಮಕೂರು :
ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ತುಮಕೂರಿನ ಸಿದ್ಧಾರ್ಥ ಕಾಲೇಜಿನಲ್ಲಿ ಐಟಿ ಅಧಿಕಾರಿಗಳಿಗೆ 40 ಲಕ್ಷ ರೂ. ಹಣ ಸಿಕ್ಕಿದ್ದು ಈ ಹಣ ದೇವಾಲಯ ಒಂದರ ಹುಂಡಿಗೆ ಸೇರಿದ್ದು ಎಂದು ಕಾಲೇಜಿನ ಸಿಬ್ಬಂದಿ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿದ್ದಾರ್ಥ ಕಾಲೇಜಿನಲ್ಲಿ 40 ಲಕ್ಷ ರೂಪಾಯಿ ಹಣ ಸಿಕ್ಕಿದ್ದು, ಈ ಬಗ್ಗೆ ಕಾಲೇಜಿನ ಲೆಕ್ಕ ವಿಭಾಗದ ಅಧಿಕಾರಿಗಳು ಅಚ್ಚರಿ ಮೂಡಿಸುವಂತೆ ಮಾಹಿತಿ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮುಳುಕಟ್ಟಮ್ಮ ದೇವಿ ಪರಮೇಶ್ವರ್ ಅವರ ಮನೆದೇವರಾಗಿದ್ದು, ಅಲ್ಲಿ ಪರಮೇಶ್ವರ್ ದೇವಾಲಯವನ್ನು ಕಟ್ಟಿಸಿದ್ದಾರೆ. ಅಲ್ಲದೇ, ದೇವಾಲಯದ ಟ್ರಸ್ಟಿ ಕೂಡ ಅವರೇ ಆಗಿದ್ದು, ಕಳೆದ ಎರಡು ತಿಂಗಳ ಹಿಂದೆ ದೇವಾಲಯದ ಹುಂಡಿ ಒಡೆಯಲಾಗಿತ್ತು. ಈ ವೇಳೆ, ದೊರೆತ ಹಣವನ್ನು ಕಾಲೇಜಿನಲ್ಲಿ ಇರಿಸಲಾಗಿತ್ತೆಂದು ಕಾಲೇಜಿನ ಲೆಕ್ಕ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ದೇವಾಲಯದ ಹುಂಡಿಯಲ್ಲಿದ್ದ ಭಾರಿ ಮೊತ್ತದ ಹಣವನ್ನು ಕಾಲೇಜಿನಲ್ಲಿ ಯಾಕೆ ಇಡಲಾಗಿತ್ತೆಂದು ಪ್ರಶ್ನೆ ಉದ್ಭವಿಸಿದ್ದು, ಕಾಲೇಜಿನ ಸಿಬ್ಬಂದಿಗಳ ಹೇಳಿಕೆ ಹತ್ತು-ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಮಾಜಿ ಡಿಸಿಎಂ ಪರಮೇಶ್ವರ್, ಆರ್.ಎಲ್. ಜಾಲಪ್ಪಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರದಿಂದ ಐಟಿ ದಾಳಿ ಮುಂದುವರಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
