ಚನ್ನರಾಯಪಟ್ಟಣ :
ನಾಲೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಉಪನ್ಯಾಸಕರೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿ ಭೈರಾಪುರ ಬಳಿ ಕಾಲುವೆಯಲ್ಲಿ ನಡೆದಿದೆ.
ಮದ್ದೂರು ತಾಲ್ಲೂಕು ಆನೆದೊಡ್ಡಿಯ ಎಂ.ಬಿ.ತುಳಸೀಪ್ರಸಾದ್ (32) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿ. ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತುಳಸೀಪ್ರಸಾದ್ ರಜೆಗೆಂದು ತನ್ನ ಸಹೋದರಿಯ ಮನೆಗೆ ಬಂದಿದ್ದಾಗ ಈ ಕೃತ್ಯ ಸಂಭವಿಸಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿ ಭೈರಾಪುರ ಬಳಿ ಕಾಲುವೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಮೃತದೇಹವನ್ನು ನೀರಿನಿಂದ ತೆಗೆದು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು. ಮರಣೋತ್ತರ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಪತ್ನಿ ಗುಣಶ್ರೀ ಮತ್ತು ಮೂರು ವರ್ಷದ ಮಗಳು ತನ್ವಿಪ್ರಸಾದ್ ಸೇರಿದಂತೆ ಅಪಾರ ಬಂಧು ಬಳಗವನ್ನು ತುಳಸೀಪ್ರಸಾದ್ ಅಗಲಿದ್ದಾರೆ.
ಈ ಸಂಬಂಧ ಮೃತ ತುಳಸೀಪ್ರಸಾದ್ ಅವರ ಮಾವ ಶ್ರೀನಿವಾಸ್ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
