ಶಾಕ್ ನೀಡಿದ ಎಲ್‍ಪಿಜಿ ದರ : ಗ್ರಾಹಕ ತತ್ತರ!!

ತುಮಕೂರು

      ಕೋವಿಡ್ ಲಾಕ್‍ಡೌನ್‍ನಿಂದ ಉಂಟಾದ ಆರ್ಥಿಕ ನಷ್ಟದಿಂದ ಜನರು ಚೇತರಿಸಿಕೊಳ್ಳುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಅಡುಗೆ ಅನಿಲ ದರ ಏರಿಕೆಯ ಶಾಕ್ ನೀಡಿದೆ. 14.2 ಕೆ.ಜಿ. ತೂಕದ ಸಿಲಿಂಡರ್ ದರವನ್ನು 25 ರೂ. ಏರಿಸಿದೆ. ಜಿಲ್ಲೆಯಲ್ಲಿ ಎಲ್‍ಪಿಜಿ ದರ 890 ರೂ. ಗೆ ಏರಿದ್ದು, ಜನ ಸಾಮಾನ್ಯರ ಅನ್ನದ ತಟ್ಟೆ ಸುಡುತ್ತಿದೆ.

      ಹೊಟೇಲ್ ನಡೆಸುವವರು, ಬೀದಿ ಬದಿಯಲ್ಲಿ ತಳ್ಳುಗಾಡಿಯಲ್ಲಿ ಚಹಾ ಅಂಗಡಿ, ಗೂಡು ಹೊಟೇಲ್ ನಡೆಸುತ್ತಾ ಬದುಕು ಸವೆಸುತ್ತಿರುವ ಜನ ಬೆಲೆ ಏರಿಕೆಯ ಬಿಸಿಗೆ ತತ್ತರಿಸಿ ಹೋಗಿದ್ದಾರೆ.

      ಕಳೆದ ಜನವರಿಯಿಂದ ಎಲ್ಪಿಜಿ ಅಡುಗೆ ಅನಿಲ ದರದಲ್ಲಿ 190 ರೂ. ಏರಿಕೆಯಾಗಿದೆ. 2020 ರ ಸೆಪ್ಟೆಂಬರ್‍ನಲ್ಲಿ 597 ರೂ.ಗಳಿದ್ದ ದರ 887 ರೂ. ಗೆ ಜಿಗಿದಿರುವುದರಿಂದ 1 ವರ್ಷದಲ್ಲಿ 290 ರೂ. ಹೆಚ್ಚಳವಾದಂತಾಗಿದೆ, ವಾಣಿಜ್ಯ ಬಳಕೆಯ ಸಿಲಿಂಡರ್ ಕೂಡ 25 ರೂ. ತುಟ್ಟಿಯಾಗಿದ್ದು, 19 ಕೆ.ಜಿಯ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ದರ 1,693 ರೂ.ಗೆ ಹೆಚ್ಚಳವಾಗಿದೆ. ಬಹುಶಹ ಅಡುಗೆಗೆ ಸೌದೆಯನ್ನು ಬಳಸುವವರನ್ನು ಹೊರತುಪಡಿಸಿ, ಇನ್ನೆಲ್ಲರಿಗೂ ಇದು ಗಂಭೀರ ಹೊಡೆತವೇ ಸರಿ.

ದುಬಾರಿಯಾದ ಬದುಕು :

      ಕೊರೊನಾ ಹೊಡೆತ, ಮೂರನೇ ಅಲೆಯ ಭೀತಿ, ದಿನೆ ದಿನೆ ಏರುತ್ತಿರುವ ಅಗತ್ಯ ವಸ್ತುಗಳು ಮತ್ತು ತೈಲ ಬೆಲೆ ಏರಿಕೆ, ಉದ್ಯೋಗ ನಷ್ಟ ಮುಂತಾದ ಗುರುತರವಾದ ಸಂಕಷ್ಟಗಳನ್ನು ಎದುರಿಸುತ್ತಿರುವ ಜನ ಸಾಮಾನ್ಯರಿಗೆ ಇದೀಗ ಸಿಲಿಂಡರ್ ಬೆಲೆ ಹೆಚ್ಚಳವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವಶ್ಯಕ ಸರಕು-ಸೇವೆಗಳ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯರ ಜೀವನ ದುಬಾರಿಯಾಗಿದ್ದು, ಬೆಲೆ ಏರಿಕೆಯ ಕಾಲದಲ್ಲಿ ಬದುಕಿನ ಬಂಡಿ ನಡೆಸುವುದೇ ಕಷ್ಟವಾಗಿದೆ.

ಜೇಬು ಸುಡಲಿವೆ ಹೋಟೆಲ್ ತಿಂಡಿಗಳು :

      ಸರ್ಕಾರ ವಾಣಿಜ್ಯ ಬಳಕೆ ಸಿಲಿಂಡರ್‍ಗಳ ಬೆಲೆಯನ್ನು ಕೇವಲ ಮೂರು ತಿಂಗಳಲ್ಲಿ 400 ರೂ.ಹೆಚ್ಚಳ ಮಾಡಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಶಾಕ್ ನೀಡಿದೆ.

     ಸಿಲಿಂಡರ್ ದರ ಹೆಚ್ಚಳದ ಹೊರೆ ಗ್ರಾಹಕರ ಮೇಲೆ ಹೊರೆಯಾಗುತ್ತಿದೆ. ದರ ಹೆಚ್ಚಳವನ್ನು ತುಮಕೂರು ನಗರ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘ ಖಂಡಿಸಿದ್ದು, ಮುಂದಿನ ವಾರದಲ್ಲಿ ಸಂಘದ ಸಭೆ ಕರೆದು ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡುವುದಾಗಿ ಸಂಘದ ಅಧ್ಯಕ್ಷ ವಾಸುದೇವಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

7 ವರ್ಷದಲ್ಲಿ ಡಬಲ್ :

     ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು 2014ರ ಮಾ.1 ರಂದು ಎಲ್‍ಪಿಜಿ ದರ 410.5 ರೂ. ಇತ್ತು. 7 ವರ್ಷದಲ್ಲಿ ದರ ಡಬಲ್‍ಗಿಂತ ಹೆಚ್ಚಾಗಿದ್ದು, ಈಗ 890 ರೂ.ಗೆ ಏರಿದೆ.

ಎಲ್ಪಿಜಿ ತುಟ್ಟಿ ಏಕೆ ? :

    ಎಲ್ಪಿಜಿಗೆ ಮಿಶ್ರಣ ಮಾಡುವ ಎರಡು ರಾಸಾಯನಿಕ ಅನಿಲಗಳಾದ ಪ್ರೊಪೇನ್ ಮತ್ತು ಬ್ಯುಟೇನ್ ಅನಿಲಗಳ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚೆಗೆ ಏರಿಕೆಯಾಗಿದೆ ಹಾಗಾಗಿ ಎಲ್ಪಿಜಿ ಸಿಲಿಂಡರ್ ದರವೂ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಮಾರುಕಟ್ಟೆಯ ಆರ್ಥಿಕ ತಜ್ಞರು.

ಮುಂದೆ ಕಾದಿದೆ ಬರೆ :

     ಮುಂದಿನ 3 ತಿಂಗಳಲ್ಲಿ ಸಿಲಿಂಡರ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, 1,000 ರೂ ಗಡಿ ದಾಟುವ ನಿರೀಕ್ಷೆ ಇದೆ. ಈ ಕುರಿತು ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಆಲ್ ಇಂಡಿಯಾ ಎಲ್‍ಪಿಜಿ ಫೆಡರೇಷನ್ ರಾಜ್ಯ ಕಾರ್ಯದರ್ಶಿ ರಮೇಶ್‍ಕುಮಾರ್ ಅವರು ಸುಳಿವು ನೀಡಿದ್ದು, ಚಳಿಗಾಲದಲ್ಲಿ ಯರೋಪ್ ದೇಶಗಳಲ್ಲಿ ಗ್ಯಾಸ್ ಬೇಡಕೆ ಹೆಚ್ಚಾಗುತ್ತೆ. ಹೀಗಾಗಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆ ಭಾರತದಲ್ಲಿಯೂ ಎಲ್‍ಪಿಜಿ ಸಿಲಿಂಡರ್ ದರ ಹೆಚ್ಚಾಗುತ್ತೆ. ಚಳಿಗಾಲದಲ್ಲಿ ಸಿಲಿಂಡರ್ ದರ ಮತ್ತಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ. ಒಂದು ವೇಳೆ ಸಿಲಿಂಡರ್ ದರ ಸಾವಿರದ ಗಡಿ ದಾಟಿದರೇ ಜನ ಸಾಮಾನ್ಯರ ಬದುಕು ಬಾಣಲೆಯಿಂದ ತೆಗೆದು ಬೆಂಕಿಗೆ ಹಾಕಿದಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಬ್ಸಿಡಿ ನೀಡದೆ ದರ ಹೆಚ್ಚಳ..! :

     ಅಘೋಷಿತವಾಗಿ ಸರ್ಕಾರವು ಎಲ್‍ಪಿಜಿ ಸಬ್ಸಿಡಿಯನ್ನು ತೆಗೆದು ಹಾಕಿದ್ದು, ಮೇ 2020 ರಿಂದ ಯಾರಿಗೂ ಸಬ್ಸಿಡಿ ಬಂದಿಲ್ಲ. ಕಾಗದದ ಮೇಲಷ್ಟೇ ಸಬ್ಸಿಡಿ ಸಹಿತ ಸಿಲಿಂಡರ್ ಎಂದು ನಮೂದಿಸುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆ ಹಾಗೂ ಸತತ ಬೆಲೆ ಏರಿಕೆಯು ಜನಾಕ್ರೋಶಕ್ಕೆ ಕಾರಣವಾಗಿದ್ದು, ಜನರು ದರ ಏರಿಕೆ ಬಗ್ಗೆ ಹಿಡಿಶಾಪ ಹಾಕುವಂತಾಗಿದೆ. ಸರ್ಕಾರದ ದರ ಏರಿಕೆಯನ್ನು ಪ್ರತಿಪಕ್ಷಗಳು ಟೀಕಿಸಿದ್ದು, ಅನಿಲ ಬೆಲೆ ಇಳಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.

ಒಲೆ ಮುಂದೆ ಹೊಗೆ ಕುಡಿಬೇಕಲ್ಲ ಅಂತ ಮನೆಗೆ ಸಿಲಿಂಡರ್ ತಂದೆವು. ಈಗ ದೀನೆ ದಿನೆ ಗ್ಯಾಸ್ ಬೆಲೆ ಹೆಚ್ಚಳವಾಗುತ್ತಿದೆ. ನಮ್ಮ ತೋಟದಲ್ಲಿ ಹೇರಳವಾಗಿ ಎಡಮಟ್ಟೆ, ಕುರಂಬಳೆ ಸಿಗುತ್ತವೆ ಹಾಗಾಗಿ ದಿನ ನಿತ್ಯದ ಅಡುಗೆಗೆ ಸೌದೆ ಒಲೆಯನ್ನೆ ಆಶ್ರಯಿಸಿದ್ದೇವೆ. ಮನೆಗೆ ಯಾರಾದ್ರೂ ಅತಿಥಿಗಳು ಬಂದಾಗ ಮಾತ್ರ ಕಾಫೀ-ಟೀ ಇಡಕ್ಕೆ ಸಿಲಿಂಡರ್ ಒಲೆ ಉರಿಸುತ್ತಿದ್ದೇವೆ.

-ಸತ್ಯಮ್ಮ, ಗೃಹಿಣಿ, ನಂದಿಹಳ್ಳಿ, ಹುಳಿಯಾರು ಹೋಬಳಿ

ಕೊರೋನಾದಿಂದ ಹೊಟೇಲ್ ಉದ್ಯಮ ಸಂಕಷ್ಟದಲ್ಲಿರುವಾಗಲೇ ಅಡುಗೆ ಎಣ್ಣೆ, ಮಸಾಲೆ ಪದಾರ್ಥ, ಇನ್ನಿತರ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಇದೀಗ ಸಿಲಿಂಡರ್ ಬೆಲೆ ದುಬಾರಿಯಾಗಿದ್ದು ಹೊಟೇಲ್ ನಡೆಸುವವರ ಮೇಲೆ ಹೊಡೆತ ಬಿದ್ದಿದೆ. ಶೀಘ್ರವೇ ಸಂಘದ ಸಭೆ ಕರೆದು ಆಹಾರ ಪದಾರ್ಥಗಳ ಬೆಲೆ ಏರಿಕೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು.

-ವಾಸುದೇವಶೆಟ್ಟಿ, ಅಧ್ಯಕ್ಷರು, ತುಮಕೂರು ನಗರ ಹೋಟೆಲ್ ಮಾಲೀಕರ ಸಂಘ

      ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿರುವ ನಡುವೆ ಈಗ ಗ್ಯಾಸ್ ಬೆಲೆ ಹೆಚ್ಚಳವಾಗಿದೆ. ಕೋವಿಡ್‍ನಿಂದ ವ್ಯಾಪಾರವಿಲ್ಲದೇ ಮೊದಲೇ ಸಂಕಷ್ಟದಲ್ಲಿದ್ದೇವೆ. ಧೀಡೀರನೆ ಟೀ-ಕಾಫೀ ಬೆಲೆಗಳನ್ನು ಹೆಚ್ಚಿಸಿದರೇ ಗಿರಾಕಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ವ್ಯಾಪಾರದಲ್ಲಿ ಗಂಟಾದರೇ ಸಾಕಪ್ಪ ಎನಿಸಿದೆ. ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸುತ್ತೇನೆ.

-ರೇವಣ್ಣ, ಟೀ ಅಂಗಡಿ ಮಾಲೀಕ

ಚಿದಾನಂದ್ ಹುಳಿಯಾರು

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap