ಬೆಂಗಳೂರು
ವಿಶ್ವವಿಖ್ಯಾತ ಮೈಸೂರು ದಸರಾಗೆ ನಿನ್ನೆ ಚಾಲನೆ ಸಿಕ್ಕಿದ್ದು ಇಂದು 2ನೇ ದಿನ ಸಂಭ್ರಮ ಮನೆಮಾಡಿದೆ. ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿರುವ ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಚಾಲನೆ ನೀಡಿದರು.
ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಮಹಿಳಾ ದಸರಾ ಸಂಭ್ರಮ ಗರಿಗೆದರಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಡಾ.ಜಯಮಾಲಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭವಾಗಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಏರ್ಪಾಡಾಗಿತ್ತು. ಈ ಮಧ್ಯೆ ನವರಾತ್ರಿ ಅಂಗವಾಗಿ ಗೊಂಬೆ ಹಬ್ಬವನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದ್ದು, ಅರಮನೆ ನಗರಿ ಮೈಸೂರಿನಲ್ಲಿ ಗೊಂಬೆಹಬ್ಬ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಮೈಸೂರಿನ ರಾಜ್ಯಮನೆತನ ಹಲವಾರು ಶತಕಗಳ ಹಿಂದೆ ಆರಂಭಿಸಿದ ಸಾಂಪ್ರದಾಯಕ ಗೊಂಬೆ ಹಬ್ಬ ವೈಶಿಷ್ಠ್ಯಪೂರ್ಣವಾಗಿದ್ದು, ಮಹಿಳೆಯರ ಕೌಶಲವನ್ನು ಇದು ಪ್ರತಿಬಿಂಬಿಸಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನವರಾತ್ರಿ ಆಚರಣೆ ಆರಂಭವಾಗಿದ್ದು, ವಿವಿಧ ದೇವಾಲಯಗಳಲ್ಲಿ ಉತ್ಸವಗಳು ಏರ್ಪಾಡಾಗಿವೆ. ಶಕ್ತಿಮಾತೆಯ ದೇವಾಲಯಗಳಲ್ಲಿ ದೇವಿಯನ್ನು ಪಟ್ಟಕ್ಕೆ ಕೂರಿಸಿ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ದೊಡ್ಡಬಳ್ಳಾಪುರದ ಸಪ್ತಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
