ಮಂಗಳೂರು:
ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ವಿಚಾರಣೆ ತೀವ್ರಗೊಂಡಿದ್ದು, ಆತನ ಬ್ಯಾಂಕ್ ಲಾಕರನಲ್ಲಿ ಪತ್ತೆಯಾದ ವಸ್ತು ಸೈನೇಡ್ ಎಂಬುದು ಈಗ ದೃಢಪಟ್ಟಿದೆ.
ಎಫ್ ಎಸ್ ಎಲ್ ನೀಡಿರುವ ಪ್ರಾಥಮಿಕ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದ್ದು, ಬಾಂಬರ್ ಆದಿತ್ಯನನ್ನು ಸೈನೇಡ್ ಕುರಿತು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೈನೇಡ್ ಆತನಿಗೆ ಎಲ್ಲಿಂದ ದೊರಕಿತ್ತು..? ಆತನೇ ವಸ್ತುಗಳನ್ನು ಬಳಸಿ ಸೈನೇಡ್ ತಯಾರಿಸಿರುವುದಾ..? ಯಾವ ಉದ್ದೇಶಕ್ಕಾಗಿ ಅದನ್ನು ಬ್ಯಾಂಕ್ ಲಾಕರ್ ನಲ್ಲಿ ಏಕೆ ಇಡಲಾಗಿತ್ತು ಎಂಬಿತ್ಯಾಗಿ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಇಂದು ಪೌರತ್ವ ತಿದ್ದುಪಡಿ ಕಾಯ್ದೆ ಪರ ಬೃಹತ್ ಸಮಾವೇಶದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮಂಗಳೂರಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಭದ್ರತೆಯ ಉಸ್ತುವಾರಿಯನ್ನು ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ಅವರು ವಹಿಸಿರುವ ಹಿನ್ನೆಲೆಯಲ್ಲಿ, ಆದಿತ್ಯ ರಾವ್ ನನ್ನು ಇಂದು ಕೆಳಮಟ್ಟದ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಮಾವೇಶ ಮುಗಿದ ಬಳಿಕ ಮತ್ತೆ ಬೆಳ್ಳಿಯಪ್ಪ ಅವರು ಆದಿತ್ಯ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಶನಿವಾರ ಉಡುಪಿಗೆ ಕರೆತಂದಿದ್ದ ಮಂಗಳೂರಿನ ಪೊಲೀಸರು ಹಲವೆಡೆ ಸ್ಥಳ ಮಹಜರು ನಡೆಸಿದರು.
ಕರ್ನಾಟಕ ಬ್ಯಾಂಕ್ ಕುಂಜಿಬೆಟ್ಟು ಶಾಖೆಗೆ ಆದಿತ್ಯ ರಾವ್ ಅನ್ನು ಕರೆತರಲಾಗಿತ್ತು. ಆತನ ಲಾಕರ್‌ನ ಕೀಲಿ ಕಳೆದು ಹೋಗಿದ್ದರಿಂದ ಕೀ ರಿಪೇರಿ ಮಾಡುವ ವ್ಯಕ್ತಿಯನ್ನು ಕರೆಸಿ ಲಾಕರ್ ಬಾಗಿಲು ತೆರೆಯಲಾಗಿತ್ತು. ಬಳಿಕ ಅದರೊಳಗಿದ್ದ ವಸ್ತು ವಶಕ್ಕೆ ತೆಗೆದುಕೊಳ್ಳಲಾಯಿತ್ತು. ನಂತರ ಲಾಕರ್ ನಲ್ಲಿ ದೊರಕಿದ್ದ ಪುಡಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಮಂಗಳೂರು ಬಜ್ಪೆ ವಿಮಾನದ ಟಿಕೇಟ್ ಕೌಂಟರ್ ಬಳಿ ಬ್ಯಾಗ್ ನಲ್ಲಿ ಸಜೀವ ಬಾಂಬ್ ಇಟ್ಟ ತಾನೇ ಪರಾರಿಯಾಗಿರುವುದಾಗಿ ಆರೋಪಿ ಆದಿತ್ಯ ರಾವ್, ಬೆಂಗಳೂರು ಪೊಲೀಸರಿಗೆ ಶರಣಾಗಿದ್ದನು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
