ಬೆಂಗಳೂರು :
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ನನ್ನು ವಶಕ್ಕೆ ಪಡೆಯಲು ಮಂಗಳೂರು ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.
ಆರೋಪಿ ಆದಿತ್ಯ ರಾವ್ ಇಂದು ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದು, ಆತನನ್ನು ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆನಂತರ ಅವರನ್ನು ಮಂಗಳೂರು ಪೊಲೀಸರ ವಶಕ್ಕೆ ಹಲಸೂರು ಗೇಟ್ ಪೊಲೀಸರು ನೀಡಿದ್ದರು. ನಂತರ ಮಂಗಳೂರು ಪೊಲೀಸರು ನಗರದ 1ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಇದೀಗ ನ್ಯಾಯಾಲಯ ಆರೋಪಿಯನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಆರೋಪಿಯ ಹಸ್ತಾಂತರಕ್ಕೆ ಸಿದ್ಧತೆ ನಡೆಸಲಾಗಿದ್ದು, ಮಂಗಳೂರು ಪೊಲೀಸರು ಇಂದು ಸಂಜೆ 7.15 ರ ವಿಮಾನದಲ್ಲಿ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ಟಿಕೆಟ್ ಬುಕ್ ಮಾಡಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೆದ್ ಹಸ್ತಾಂತರ ಪ್ರಕ್ರಿಯೆ ನೋಡಿಕೊಳ್ಳಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ