ಮಂಗಳೂರು :
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿರುವ ಎಸ್.ಸಸಿಕಾಂತ್ ಸೆಂಥಿಲ್ ಅವರು ಐಎಎಸ್ ಸೇವೆಗೆ ಇಂದು ಹಠಾತ್ ರಾಜೀನಾಮೆ ಸಲ್ಲಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ, ಉತ್ತಮ ಸೇವೆ ಸಲ್ಲಿಸಿದ್ದ ಇವರು, ತಮ್ಮ ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ತಮ್ಮ ರಾಜೀನಾಮೆಗೆ ಯಾವುದೇ ವ್ಯಕ್ತಿ ಅಥವಾ ಸದ್ಯ ತಾನು ಸೇವೆ ಸಲ್ಲಿಸುತ್ತಿರುವ ದ.ಕ. ಜಿಲ್ಲಾಧಿಕಾರಿ ಅವಧಿಯಲ್ಲಿನ ಯಾವುದೇ ಘಟನೆ ಕಾರಣವಲ್ಲ ಎಂದು ತಿಳಿಸಿದ್ದಾರೆ. ಅರ್ಧದಲ್ಲಿಯೇ ರಾಜೀನಾಮೆ ನೀಡಿ ತೆರಳುತ್ತಿರುವುದಕ್ಕೆ, ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
‘ನಮ್ಮ ವೈವಿಧ್ಯ ಪ್ರಜಾಪ್ರಭುತ್ವದ ಮೂಲಭೂತ ರಚನೆಗಳ ಜೊತೆ ಹಿಂದೆಂದೂ ಕಂಡಿರದ ರೀತಿಯಲ್ಲಿ ರಾಜಿ ಮಾಡಿಕೊಳ್ಳುವಾಗ ನಾಗರಿಕ ಸೇವೆಯಲ್ಲಿ ಮುಂದುವರಿಯುವುದು ನನಗೆ ಅನೈತಿಕವೆಂದು ಎನಿಸಿದ ಕಾರಣ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೂಲ ಚೌಕಟ್ಟುಗಳು ಅತ್ಯಂತ ಕಷ್ಟಕರ ಸವಾಲುಗಳನ್ನು ಎದುರಿಸಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಆದ್ದರಿಂದ ನಾನು ಐಎಎಸ್ ನಿಂದ ಹೊರಬಂದು ನನ್ನ ಕೆಲಸ ಮುಂದುವರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ” ಎಂದವರು ತಿಳಿಸಿದ್ದಾರೆ.
ಉತ್ತಮ ಕೆಲಸಗಳೊಂದಿಗೆ ಹೆಸರುವಾಸಿಯಾಗಿ ಜನರಿಗೆ ಆಪ್ತರಾಗಿದ್ದ ಸಸಿಕಾಂತ್ ಸೆಂಥಿಲ್ ಈ ಹಿಂದೆ ಜಿಲ್ಲೆಯ ಅನೇಕ ಕಡೆ ಪ್ರವಾಹ ಸಂಭವಿಸಿದ್ದು ಈ ಸಂಧರ್ಭ ನಿರಾಶ್ರಿತರೊಂದಿಗಿದ್ದು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದರು. ಜೊತೆಗೆ ಜಿಲ್ಲೆಯಲ್ಲಿದ್ದ ಡೆಂಘೀ, ಅಕ್ರಮ ಮರಳುಗಾರಿಕೆ ಮತ್ತಿತರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ತಮಿಳುನಾಡು ಮೂಲದವರಾದ ಸಸಿಕಾಂತ್ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರ್ ಪದವೀಧರರು. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ದ.ಕ ಜಿಲ್ಲಾಧಿಕಾರಿಗೂ ಮುಂಚೆ ಇವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ