ಮಂಗಳೂರು:
ಪರಿಚಯದ ಯುವತಿಯನ್ನು ಮಂಗಳೂರಿನ ಬಾಡಿಗೆ ಕೊಠಡಿಯಲ್ಲಿ ಕೊರಳಿಗೆ ಕೇಬಲ್ ಬಿಗಿದು ಹತ್ಯೆ ಮಾಡಿ ಪರಾರಿಯಾಗಿದ್ದ ಯುವಕನನ್ನು ವಿಜಯಪುರ ಸಿಂಧಗಿಯಲ್ಲಿ ಮಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತನನ್ನು ಸಿಂಧಗಿ ಬೆನಕೊಟಗಿ ತಾಂಡದ ಬಾಲು ರಾಠೋಡ್ ಅವರ ಪುತ್ರ ಸಂದೀಪ್ ರಾಥೋಡ್ ಎಂದು ಗುರುತಿಸಲಾಗಿದ್ದು, ಪ್ರಕರಣದ ನಡೆದ 24 ಗಂಟೆ ಕಳೆಯುವುದರೊಳಗಾಗಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಅತ್ತಾವರದ ಬಾಡಿಗೆ ಮನೆಯೊಂದರಲ್ಲಿ ನಿನ್ನೆ ಸಂಜೆ ಕಾಲೇಜು ವಿದ್ಯಾರ್ಥಿನಿ ಮೃತದೇಹ ಪತ್ತೆಯಾಗಿತ್ತು. ಮೃತ ವಿದ್ಯಾರ್ಥಿನಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಅಂಜನಾ ವಸಿಷ್ಠ ಎಂದು ಗುರುತಿಸಲಾಗಿತ್ತು.
ಮೃತ ಅಂಜನಾ ವಶಿಷ್ಠ ಬ್ಯಾಂಕ್ ನೌಕರಿ ಪರೀಕ್ಷೆ ಬರೆಯಲೆಂದು ಮಂಗಳೂರಿಗೆ ಬಂದಿದ್ದಳು. ಇನ್ನೂ ಆರೋಪಿ ಸಂದೀಪ್ ರಾಥೋಡ್ ಕೂಡ ಪಿಎಸ್‍ಐ ಪರೀಕ್ಷೆ ಬರೆಯಲು ಬಂದಿದ್ದನು. ನಂತರ ದಂಪತಿ ಸೋಗಿನಲ್ಲಿ ಐದು ದಿನಗಳ ಹಿಂದೆಯಷ್ಟೇ ಮಂಗಳೂರಿನ ಅತ್ತಾವರದಲ್ಲಿ ಬಾಡಿಗೆ ಕೊಠಡಿ ಪಡೆದಿದ್ದರು.
ಅಂಜನಾ ಪೋಷಕರು ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ತಯಾರಿ ನಡೆಸಿದ್ದರು. ಹೀಗಾಗಿ ಶುಕ್ರವಾರ ಬೆಳಗ್ಗೆ ಅಂಜನಾಳನ್ನು ಕೊಲೆಗೈದು ಸಂದೀಪ್ ಪರಾರಿಯಾಗಿದ್ದನು. ಕೊಠಡಿಗೆ ಹೊರಗಿನಿಂದ ಬಾಗಿಲು ಹಾಕಿ ಆರೋಪಿ ಪರಾರಿಯಾಗಿದ್ದನು. ನಿನ್ನೆ ಸಂಜೆ ಕಟ್ಟಡದ ಮಾಲೀಕರು ಅನುಮಾನದ ಮೇರೆಗೆ ಕೊಠಡಿಯ ಬಾಗಿಲು ತೆರೆದಾಗ ಕೊಲೆ ಪ್ರಕರಣ ಬಯಲಾಗಿತ್ತು. ಬಾಡಿಗೆ ಮನೆಯಲ್ಲಿ ಮಂಚದ ಸರಳುಗಳ ನಡುವೆ ಕತ್ತು ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು.
ಪ್ರಕರಣದ ತನಿಖೆಗೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು ಘಟನೆ ನಡೆದ 24 ಗಂಟೆಯ ಒಳಗೆ ಆರೋಪಿಯನ್ನು ಸಿಂದಗಿಯಲ್ಲಿ ಬಂಧಿಸಿದ್ದಾರೆ. ಇದೀಗ ಈತನನ್ನು ಮಂಗಳೂರಿಗೆ ಕರೆತರಲಾಗುತ್ತಿದೆ. ವಿಚಾರಣೆಯ ಬಳಿಕ ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬ ವಿಚಾರ ಬೆಳಕಿಗೆ ಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
