ಬೆಂಗಳೂರು:
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್‍ನನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರಿಗೆ ಕರೆ ತಂದಿದ್ದಾರೆ.
ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾತ್ರಿ ದೆಹಲಿ ಕೋರ್ಟ್ ಎದುರು ಹಾಜರು ಪಡಿಸಿದ್ದರು. ಇಂದು ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದು ತಂದಿದ್ದಾರೆ. ಈ ವೇಳೆ ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕದ ಎಸ್ ಐಟಿ ಅಧಿಕಾರಿಗಳು ಕೂಡ ಇಡಿ ಅಧಿಕಾರಿಗಳ ಜೊತೆ ಇದ್ದರು ಎನ್ನಲಾಗಿದೆ.
ಸದ್ಯಕ್ಕೆ ಬಳ್ಳಾರಿಯ ಕಾವೇರಿ ಜಂಕ್ಷನ್ ಬಳಿ ಕಾರಿನಲ್ಲಿ ಖಾನ್‍ನನ್ನು ಇಡಿ ಅಧಿಕಾರಿಗಳು ಕರೆದುಕೊಂಡು ಬರುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಾಂತಿನಗರದ ಇಡಿ ವಿಶೇಷ ಕೋರ್ಟ್ ಎದುರು ಅಧಿಕಾರಿಗಳು ಮನ್ಸೂರ್ ಖಾನ್‍ನನ್ನು ಹಾಜರು ಪಡಿಸಲಿದ್ದಾರೆ. ಈ ವೇಳೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸುವ ಸಾಧ್ಯತೆ ಇದೆ. ಪೊಲೀಸರು ಜೊತೆಗೆ ಎಸ್‍ಐಟಿ ಇಲಾಖೆಯವರು ಕೂಡ ತಮ್ಮ ವಶಕ್ಕೆ ನೀಡುವಂತೆ ಕೇಳುವ ಸಾಧ್ಯತೆ ಇದೆ.
ಈಗಾಗಲೇ ಐಎಂಎ ಮೂಲಕ ಮನ್ಸೂರ್ ಖಾನ್ 200 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಸ್ತಿ ಮಾಡಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದ್ದು, ವಿಚಾರಣೆಯಿಂದ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ