ಬೆಂಗಳೂರು:
ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯ, ಆದಿಚುಂಚನಗಿರಿ ಹಾಗೂ ನಂಜನಗೂಡು ದೇವಸ್ಥಾನವನ್ನು ಬಂದ್ ಮಾಡಲಾಗಿದೆ.
ಮಾರಣಾಂತಿಕ ಕೊರೋನಾ ವೈರಸ್ ಹರಡುವ ಭೀತಿ ಎಲ್ಲೆಡೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ದೇವಾಲಯಗಳನ್ನು ಮುಚ್ಚಲಾಗಿದೆ. ಅದೇ ರೀತಿ, ಇಂದಿನಿಂದ ಮಂತ್ರಾಲಯ, ಆದಿಚುಂಚನಗಿರಿ ಹಾಗೂ ನಂಜನಗೂಡು ದೇವಸ್ಥಾನವನ್ನು ಬಂದ್ ಮಾಡಲಾಗಿದೆ.
ಈ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ರಾಯರ ದರ್ಶನ ಬಂದ್ ಆಗಿತ್ತು. 11 ವರ್ಷಗಳ ಬಳಿಕ ಮತ್ತೆ ಇಂದಿನಿಂದ ರಾಯರ ದರ್ಶನ ಭಕ್ತರಿಗೆ ಲಭ್ಯವಿಲ್ಲ. ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸದಂತೆ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರುಗಳು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಕ್ತಾದಿಗಳಲ್ಲಿ ತಿಳಿಸಿದ್ದಾರೆ.
ಇಂದಿನಿಂದ ನಂಜನಗೂಡಿನ ಶ್ರೀ ನಂಜುಡೇಶ್ವರನ ದರ್ಶನ ಭಕ್ತರಿಗೆ ಇಲ್ಲ. ಕೊರೊನಾದಿಂದಾಗಿ ನಂಜನಗೂಡು ದೇವಾಲಯವನ್ನು ಬಂದ್ ಆಗಿದೆ. ಆದರೆ, ಎಂದಿನಂತೆ ಪೂಜೆ-ಪುರಸ್ಕಾರ ನಡೆಯಲಿವೆ.
ಜಗತ್ತಿನಾದ್ಯಂತ ಕೊರೋನಾ ವೈರಸ್ಗೆ ಇದುವರೆಗೂ 8 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 2 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಭಾರತದಲ್ಲಿ ಈಗಾಗಲೇ ಮೂವರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ 14 ಜನರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ದೇವರ ದರ್ಶನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ